ಕಂಪ್ಯೂಟರ್ ಕಲಿಕೆಗಾಗಿ ಹಲವಾರು ಕನ್ನಡ ಪುಸ್ತಕಗಳು ವಿವಿಧ ಕಾಲಘಟ್ಟಗಳಲ್ಲಿ ಪ್ರಕಟವಾಗಿವೆ. ೧೯೮೦ರ ದಶಕದ ಆರಂಭದಲ್ಲಿ ಕಂಪ್ಯೂಟರ್ ಕುರಿತು ಕನ್ನಡದಲ್ಲಿ ‘ ಗಣಕಯಂತ್ರಗಳು ’ ಎಂಬ ಮೊಟ್ಟಮೊದಲ ಪುಸ್ತಕವನ್ನು ರಚಿಸಿದವರು ಅಮೆರಿಕದಲ್ಲಿ ನೆಲೆಸಿದ್ದ ಶ್ರೀಮತಿ ನಳಿನಿ ಮೂರ್ತಿ. ತದನಂತರದಲ್ಲಿ , ಪ್ರಮುಖವಾಗಿ ಗುರುತಿಸಬಹುದಾದ ಪುಸ್ತಕಗಳು ಪ್ರಕಟಗೊಂಡಿವೆ. ಮಕ್ಕಳಿಗಾಗಿ ಕೆಲವು ಸಣ್ಣ ಸಣ್ಣ ಪುಸ್ತಕಗಳನ್ನು ಇನ್‌ಪೋಸಿಸ್ ಫೌಂಡೇಷನ್‌ನ ಶ್ರೀಮತಿ ಸುಧಾಮೂರ್ತಿಯವರು ರಚಿಸಿದ್ದಾರೆ. ಮೈಸೂರು ವಿಶ್ವವಿದ್ಯಾಲಯದ ಪ್ರಸಾರಾಂಗವು ೧೯೯೩ರಲ್ಲಿ ‘ ಕಂಪ್ಯೂಟರ್ ’ ಎಂಬ ಶೀರ್ಷಿಕೆಯ ಒಂದು ಪುಸ್ತಕವನ್ನು ಪ್ರಕಟಿಸಿದೆ. ಶ್ರೀ ಕೆ.ಹರಿದಾಸ ಭಟ್‌ರವರು ಇದನ್ನು ರಚಿಸಿದ್ದಾರೆ. ಕಂಪ್ಯೂಟರ್ ಕುರಿತ ವಿವರಣಾತ್ಮಕ ಅಧ್ಯಾಯಗಳು , ವಿವಿಧ ಕ್ಷೇತ್ರಗಳಲ್ಲಿ ಕಂಪ್ಯೂಟರ್ ಬಳಕೆ ಮತ್ತು ಭವಿಷ್ಯದಲ್ಲಿ ಕಂಪ್ಯೂಟರ್ ಬಳಕೆ ಕುರಿತಾಗಿ ಉಪಯುಕ್ತ ಮಾಹಿತಿಗಳು ಅದರಲ್ಲಿವೆ. ಬೆಂಗಳೂರಿನ ಡೈನಾರಾಮ್ ಪಬ್ಲಿಕೇಷನ್ಸ್ ೧೯೯೪ರಲ್ಲಿ ‘ ಕಂಪ್ಯೂಟರ್ - ಮೂಲತತ್ವಗಳು ಮತ್ತು ಪ್ರೋಗ್ರಾಮ್ ರಚನೆ ’ ಎಂಬ ಪುಸ್ತಕವನ್ನು ಪ್ರಕಟಿಸಿದೆ. ವಿವಿಧ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕಂಪ್ಯೂಟರ್ ಶಿಕ್ಷಣವನ್ನು ನೀಡುತ್ತಿದ್ದ , ಕಂಪ್ಯೂಟರ್ ತಜ್ಞರಾದ ಪ್ರೊ || ಆರ್.ಶ್ರೀಧರ್ ಇದನ್ನು ರಚಿಸಿದ್ದಾರೆ. ಕಂಪ್ಯೂಟರ್ ಕುರ...