ಅಗತ್ಯ ಮಾಹಿತಿಗಾಗಿ ಅಂತರಜಾಲವನ್ನು ಜಾಲಾಡಲು ಹಲವಾರು ಸರ್ಚ್ ಎಂಜಿನ್‌ಗಳಿವೆ. ಬೇಕಾದ ಮಾಹಿತಿಗಳು ಇರಬಹುದಾದ ಅಂತರಜಾಲತಾಣಗಳ ದೊಡ್ಡ ಪಟ್ಟಿಯನ್ನು ಕ್ಷಣಾರ್ಧದಲ್ಲಿ ಕಣ್ಣಮುಂದೆ ತಂದಿಡುವ ಸರ್ಚ್ ಇಂಜಿನ್‌ಗಳಲ್ಲಿ ಇಂಗ್ಲಿಷ್ ಅಷ್ಟೇಅಲ್ಲದೆ ಕನ್ನಡದ ಮಾಹಿತಿಯನ್ನೂ ಸಹ ಹುಡುಕಾಡಬಹುದು. ಅದಕ್ಕಾಗಿ ಕನ್ನಡ ಲಿಪಿಯಲ್ಲಿ ಪದ , ಪದಪುಂಜಗಳನ್ನು ನಮೂದಿಸುವುದು ಅಗತ್ಯ. ಯಾವುದೇ ವಿಷಯದ ಕುರಿತಾಗಿ ಮಾಹಿತಿ ಬೇಕಾದರೆ ನಮಗೆ ಇಂಗ್ಲಿಷ್‌ನಲ್ಲಿಯೇ ಹುಡುಕುವುದು ಅಭ್ಯಾಸವಾಗಿಹೋಗಿದೆ. ಕನ್ನಡ ಭಾಷೆಯ ಕುರಿತಾಗಿ ತಿಳಿಯಲು ಇಂಗ್ಲಿಷ್‌ನಲ್ಲಿಯೇ ‘Kannada ’ ಎಂದು ಟೈಪ್‌ಮಾಡುತ್ತೇವೆಯೇ ಹೊರತು ‘ ಕನ್ನಡ ’ ಎಂದು ನಮೂದಿಸಬೇಕು ಎಂಬುದು ತಕ್ಷಣಕ್ಕೆ ಅನ್ನಿಸುವುದೇ ಇಲ್ಲ. ಹಾಗೆ , ಹುಡುಕಾಡಲು ಸರ್ಚ್‌ಬಾಕ್ಸ್‌ನಲ್ಲಿ ಕನ್ನಡ ಲಿಪಿಯನ್ನು ಮೂಡಿಸುವುದು ಹೇಗೆ ಎಂಬುದೇ ಬಹುತೇಕರಿಗೆ ತಿಳಿದಿರುವುದಿಲ್ಲ. ಯಾವುದಾದರೊಂದು ವಿಷಯದ ಕುರಿತಾಗಿ ಪ್ರಬಂಧವನ್ನು ಬರೆಯುವ ಅಸೈನ್‌ಮೆಂಟ್‌ಗಾಗಿ ಶಾಲಾಮಕ್ಕಳು ಇಂದು ಗೂಗಲ್ ಸರ್ಚ್ ಮೂಲಕ ಇಂಗ್ಲಿಷ್ ಮಾಹಿತಿಯನ್ನು ಪಡೆದು ನಂತರ ಅದನ್ನು ಕನ್ನಡಕ್ಕೆ ಭಾಷಾಂತರಿಸಿಕೊಳ್ಳುವ ಬಳಸು ಮಾರ್ಗವನ್ನು ಅನುಸರಿಸುತ್ತಿದ್ದಾರೆ. ಇಂತಹ ಮಾಹಿತಿಗಳನ್ನು ಕನ್ನಡಲಿಪಿಯಲ್ಲಿಯೇ ಪಡೆಯಬೇಕಾದರೆ , ಅದಕ್ಕಾಗಿ ಹುಡುಕಾಟವನ್ನು ಹೇಗೆ ಮಾಡಬೇಕು ಎಂಬುದು ಮಕ್ಕಳಿಗಿರಲಿ ಅವರ ಪೋಷಕರಿಗೂ ಸಹ ತಕ್...