‘ಗೂಗಲ್ ನ್ಯೂಸ್’ನಲ್ಲಿ ಕನ್ನಡ ಏಕಿಲ್ಲ? ಎಂಬ ಪ್ರಶ್ನೆ ಇತ್ತಿಚೆಗೆ ಪತ್ರಿಕೆಗಳಲ್ಲಿ ಚರ್ಚೆಗೆ ಬಂದಿತ್ತು. ಇಂತಹ ಪ್ರಶ್ನೆಯು
ಕಳೆದ ಐದಾರು ವರ್ಷಗಳಿಂದ ಅಂತರಜಾಲದಲ್ಲಿ ಅನುರಣಿಸುತ್ತಲೇ ಬಂದಿದೆ. ಈ ಕುರಿತು ಗೂಗಲ್ ಇದುವರೆವಿಗೂ ತಟಿಪಿಟಕ್
ಎಂದಿಲ್ಲ. ಮಲಯಾಳಂ, ಗೂಗಲ್ ನ್ಯೂಸ್‌ನಲ್ಲಿ ಸೇರ್ಪಡೆಯಾದ ಮೊದಲ ಭಾರತೀಯ
ಭಾಷೆ. ನಂತರದಲ್ಲಿ, ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳು ಸೇರಿಕೊಂಡವು.
ಹಲವು ವರ್ಷಗಳಿಂದ ಕನ್ನಡವನ್ನು ಸೇರಿಸಲು ಎಲ್ಲೆಡೆಯಿಂದ ಒತ್ತಡ ಬಂದರೂ ಬಹುರಾಷ್ಟ್ರೀಯ
ಕಂಪನಿಯಾದ ಗೂಗಲ್ ಇಂದಿಗೂ ಒತ್ತಡಕ್ಕೆ ಮಣಿದಿಲ್ಲ. ಬೆಂಗಳೂರಿನಲ್ಲಿಯೇ ತನ್ನ ಶಾಖಾ ಕಚೇರಿಯನ್ನು
ಹೊಂದಿರುವ ಗೂಗಲ್, ಕನ್ನಡದ
ನೆಲ-ಜಲ ಎಲ್ಲವನ್ನೂ ಬಳಸಿಕೊಂಡು ಕನ್ನಡಕ್ಕೆ ನಿರೀಕ್ಷಿತ ಪ್ರಾಧಾನ್ಯತೆ ನೀಡುತ್ತಿಲ್ಲ ಎಂಬುದು
ಇದರಿಂದ ಸಾಬೀತಾಗಿದೆ. ಬಹುರಾಷ್ಟ್ರೀಯ ಕಂಪನಿಗಳು ಭಾಷಾಭಿಮಾನದಿಂದ ಕೆಲಸಮಾಡುವುದಿಲ್ಲ. ಅದು
ಯಾವುದೇ ಕಂಪನಿ ಇರಲಿ, ಹಣವೇ ಅವುಗಳ ವ್ಯವಹಾರದ ಭಾಷೆ. ವ್ಯಾಪಾರೀ ದೃಷ್ಟಿಕೋನವುಳ್ಳ ಅವು ಲಾಭದಾಯಕವಲ್ಲದ
ಯಾವುದೇ ಚಟುವಟಿಕೆಗಳನ್ನು ಮಾಡುವುದಿಲ್ಲ. ಲಾಭವಿದ್ದರೆ ಮಾತ್ರವೇ ಭಾಷಾಸವಲತ್ತುಗಳನ್ನು ಸೇರಿಸಿ
ಆಯಾಯ ಭಾಷಿಕ ಮಾರುಕಟ್ಟೆಗಳನ್ನು ಆಕ್ರಮಿಸಲು ಅವು ಸಿದ್ಧವಾಗುತ್ತವೆ ಎನ್ನುವುದು ಸುಳ್ಳಲ್ಲ.
ಡಿಜಿಟಲ್ ಲೋಕದಲ್ಲಿ ಕನ್ನಡದ ಸ್ಥಾನಮಾನಗಳ ಕುರಿತು ನಿರಂತರವಾದ ಚರ್ಚೆ ಅಂತರಜಾಲದಲ್ಲಿ
ನಡೆದೇ ಇದೆ. ಹಿಂದೆ, ಡಿಜಿಟಲ್ ಉಪಕರಣಗಳಲ್ಲಿ ಕನ್ನಡದ ಬಳಕೆಯ ಸವಲತ್ತುಗಳನ್ನು ಬಹುತೇಕ ಬಾರಿ ಆಯಾಯ ಕಂಪನಿಗಳ
ಮೇಲೆ ಒತ್ತಡವನ್ನು ಹೇರಿಯೇ ಪಡೆಯಲಾಗಿದೆ ಎಂಬುದು ಇತಿಹಾಸ. ಭಾರತ ದೇಶದ ಡಿಜಿಟಲ್ ಲೋಕದಲ್ಲಿ
ಪ್ರಾದೇಶಿಕ ಭಾಷೆಗಳ ಬಳಕೆ ಹೆಚ್ಚುತ್ತಿದ್ದಂತೆ, ತನ್ನ ಮಾರುಕಟ್ಟೆಯನ್ನು ವಿಸ್ತರಿಸಿಕೊಳ್ಳುವ ದೃಷ್ಟಿಯಿಂದ, ಕಂಪ್ಯೂಟರ್, ಸ್ಮಾರ್ಟ್‌ಫೋನುಗಳು, ಐಪ್ಯಾಡ್ ಇತ್ಯಾದಿಗಳಲ್ಲಿ ಭಾರತೀಯ ಭಾಷಾ ಬಳಕೆಯ
ಸವಲತ್ತುಗಳನ್ನು ನೀಡುವುದು ಬಹುರಾಷ್ಟ್ರೀಯ ಕಂಪನಿಗಳಿಗೆ ಅನಿವಾರ್ಯವಾಗಿದೆ.
ಮೈಕ್ರೋಸಾಫ್ಟ್ ಕಂಪನಿಯು ಈಗಾಗಲೇ ತನ್ನ ಕಂಪ್ಯೂಟರ್ ತಂತ್ರಾಂಶಗಳಲ್ಲಿ ಕನ್ನಡದ
ತಂತ್ರಜ್ಞಾನವನ್ನು ಅಳವಡಿಸಿ ನೀಡಿದೆ. ತನ್ನದೇ ಓ.ಎಸ್. ಇರುವ ವಿಂಡೋಸ್ ಸ್ಮಾರ್ಟ್‌ಫೋನ್‌ಗೆ
ಕನ್ನಡವನ್ನು ಅಳವಡಿಸುವುದು ಅದಕ್ಕೆ ಕಷ್ಟವಾಗಲಿಲ್ಲ.
ಹೀಗಾಗಿ, ದುಬಾರಿ
ಬೆಲೆಯ ವಿಂಡೋಸ್ ಫೋನ್‌ಗಳಲ್ಲಿ ಕನ್ನಡದ ಸವಲತ್ತುಗಳು ಚೆನ್ನಾಗಿಯೇ ಇವೆ. ಗೂಗಲ್ ಕಂಪನಿಯ
ನಿಯಂತ್ರಣದಲ್ಲಿರುವ ಆಂಡ್ರಾಯ್ಡ್ ಓ.ಎಸ್. ಬಳಸುವ, ಗಣನೀಯವಾಗಿ ಕಡಿಮೆ ಬೆಲೆಯ, ಸ್ಮಾರ್ಟ್‌ಫೋನ್‌ಗಳನ್ನು ಬಹುತೇಕ ಜನಸಾಮಾನ್ಯರು ಬಳಸುತ್ತಾರೆ. ಅವುಗಳಲ್ಲಿ ಕನ್ನಡದ
ಸವಲತ್ತುಗಳು ಲಭ್ಯವಾಗಿ ದಶಕಗಳೇ ಸಂದಿವೆ. ಆದರೆ, ಶ್ರೀಮಂತರು ಬಳಸುವ ಐಫೋನ್‌ನಲ್ಲಿ ಕನ್ನಡದ ಸವಲತ್ತನ್ನು ನೀಡಲು ಆಪಲ್ ಕಂಪನಿಯು ಮೀನಮೇಷ
ಎಣಿಸುತ್ತಿತ್ತು. ಐಫೋನ್ ಬಳಸುತ್ತಿದ್ದ ಕನ್ನಡಿಗರು ಕಳೆದ ಐದು ವರ್ಷಗಳಿಂದ ಕನ್ನಡದ ಕೀಬೋರ್ಡ್‌ಗಾಗಿ
ಮನವಿಮಾಡುತ್ತಲೇ ಬಂದಿದ್ದರು. ಐಫೋನ್‌ನಲ್ಲಿ
ಕನ್ನಡದ ಕೀಬೋರ್ಡ್‌ಗಾಗಿ ‘ಗ್ರಾಹಕ ಹಕ್ಕ’ನ್ನು ಪ್ರತಿಪಾದಿಸಿ ‘ಕನ್ನಡ ಗ್ರಾಹಕರ ಕೂಟ’ವು ನೂರಾರು ಇ-ಮೇಯ್ಲ್‌ಗಳನ್ನು ಕಳುಹಿಸಿ ಆಂದೋಲನವನ್ನೇ ನಡೆಸಿತು. ಆಪಲ್ ಇದೀಗ
ಉತ್ತಮವಾದ ಕೀಬೋರ್ಡ್‌ಅನ್ನು ಬಿಡುಗಡೆಮಾಡಿದೆ.
ತಡವಾಗಿಯಾದರೂ ಆಪಲ್ ಕನ್ನಡಕ್ಕೆ ಉತ್ತಮ ಸವಲತ್ತನ್ನು ನೀಡಿದೆ ಎಂದು
ಸಮಾಧಾನಪಟ್ಟುಕೊಳ್ಳಬಹುದು.
ಭಾರತದಲ್ಲಿ ಹೊಸದಾಗಿ ಅಂತರಜಾಲ ಬಳಸಲಾರಂಭಿಸಿರುವವರು ತಮ್ಮ ತಮ್ಮ ಭಾಷೆಗಳಿಗಾಗಿ ‘ಗೂಗಲ್ ಹುಡುಕಾಟ’ ಮಾಡುತ್ತಿರುವುದನ್ನು ಮನಗಂಡ ಗೂಗಲ್ ಕಂಪನಿಯು ಭಾರತ
ದೇಶದಲ್ಲಿ ಇತ್ತೀಚೆಗೆ ಒಂದು ಸಮೀಕ್ಷೆಯನ್ನು ಕೈಗೊಂಡಿತು. ಭಾರತದಲ್ಲಿ ೨೦ ಕೋಟಿ ಅಂತರಜಾಲ
ಬಳಕೆದಾರರಿದ್ದು ಅವರಲ್ಲಿ ಶೇ.೯೦ರಷ್ಟು ಜನರು
ತಮ್ಮ ಪ್ರಾದೇಶಿಕ ಭಾಷೆಗಳಲ್ಲಿ ಅಂತರಜಾಲವನ್ನು ಬಳಸುತ್ತಿರುವುದು ಈ ಅಧ್ಯಯನದಿಂದ
ಕಂಡುಬಂದಿದೆ. ಪ್ರಾದೇಶಿಕ ಭಾಷೆಯಲ್ಲಿ ಅಂತರಜಾಲ ಬಳಸುವವರಲ್ಲಿ ಹೆಚ್ಚಿನವರು ಗ್ರಾಮೀಣ
ಪ್ರದೇಶದವರೇ ಆಗಿದ್ದಾರೆ. ಭಾರತೀಯ ಭಾಷಾ
ಬಳಕೆದಾರರ ಪೈಕಿ ತಮಿಳು ಮೊದಲ ಸ್ಥಾನದಲ್ಲಿದೆ (ಶೇ.೪೨). ನಂತರದ ಸ್ಥಾನದಲ್ಲಿ ಹಿಂದಿ (ಶೇ.೩೯) ತದನಂತರದ
ಸ್ಥಾನದಲ್ಲಿ ಕನ್ನಡ ಇದೆ (ಶೇ.೩೭) ಎಂಬ ಅಂಶಗಳು ಅಧ್ಯಯನದಿಂದ ತಿಳಿದುಬಂದಿದೆ.
ಉತ್ತಮ ಸವಲತ್ತುಗಳುಳ್ಳ ಸ್ಮಾರ್ಟ್‌ಫೋನುಗಳನ್ನು ಉತ್ಪಾದಿಸುವ ಬಹುರಾಷ್ಟ್ರೀಯ ಕಂಪನಿಗಳು
ವ್ಯಾವಹಾರಿಕ ಲಾಭಕ್ಕಾಗಿ ಈಗ ಭಾಷಾ ಸವಲತ್ತುಗಳನ್ನು ನೀಡಲಾರಂಭಿಸಿವೆಯೇ ಹೊರತು, ಭಾಷಾಭಿಮಾನಕ್ಕಾಗಿ ಅಲ್ಲ ಎಂಬುದು ವ್ಯಾವಹಾರಿಕ
ಸತ್ಯವಾಗಿದೆ. ಅಂತರಜಾಲದಲ್ಲಿ ಕನ್ನಡ ಭಾಷೆಯ
ಬಳಕೆಯು ಇಡೀ ದೇಶದಲ್ಲಿಯೇ ಮೂರನೆಯ ಸ್ಥಾನವನ್ನು ಹೊಂದಿರುವುದರಿಂದ ಡಿಜಿಟಲ್ ಲೋಕದಲ್ಲಿ ಕನ್ನಡ
ಭಾಷೆಯ ಬಳಕೆಯ ಸವಲತ್ತುಗಳಿಗಾಗಿ ನಾವು ಬಹುರಾಷ್ಟ್ರೀಯ ಕಂಪನಿಗಳ ಮೇಲೆ ಒತ್ತಡ ಹೇರುವುದು ಇನ್ನು
ಮುಂದೆ ಅಗತ್ಯವಿಲ್ಲ ಎನಿಸುತ್ತದೆ. ಬಳಕೆಯ
ಅಂಕಿಸಂಖ್ಯೆಗಳೇ ಮಾರುಕಟ್ಟೆಯ ವ್ಯಾಖ್ಯಾನ ಮಾಡುವುದರಿಂದ ಮಾರುಕಟ್ಟೆಯ ಟ್ರೆಂಡ್ ಗಮನಿಸಿ
ಕಂಪನಿಗಳೇ ಕನ್ನಡದ ಸವಲತ್ತುಗಳನ್ನು ನೀಡುತ್ತವೆ ಎಂದು ಭಾವಿಸಬಹುದು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ