ಆಡಳಿತದಲ್ಲಿ ಕನ್ನಡ ಅನುಷ್ಠಾನಕ್ಕಾಗಿ ಕರ್ನಾಟಕ ಸರ್ಕಾರವು ಕಾಲಕಾಲಕ್ಕೆ ನೂರಾರು ಆದೇಶಗಳನ್ನು ಹೊರಡಿಸಿದೆ. ಕನ್ನಡವನ್ನು ಎಲ್ಲ ಹಂತಗಳಲ್ಲಿ ಕನ್ನಡವನ್ನೇ ಬಳಸಬೇಕು ಎಂದು ಸದಾ ತಾಕೀತು ಮಾಡಲು ಕನ್ನಡ ಅಭಿವೃದ್ಧಿ ಪ್ರಾಧಿಕಾರವು ತನ್ನ ಚಾಟಿಬೀಸುವ ಕೆಲಸವನ್ನು ನಿರಂತರವಾಗಿ ಮಾಡುತ್ತಲೇ ಇದೆ. ಆಡಳಿತದಲ್ಲಿ ಸಾಮಾನ್ಯ ಕನ್ನಡ ಬಳಕೆಯ ಅನುಷ್ಠಾನವೇ ಹೀಗಿದ್ದಾಗ, ಡಿಜಿಟಲ್ ಕನ್ನಡದ ಪರಿಸ್ಥಿತಿ ಹೇಗಿದೆ? ಎಂಬುದು ಈಗಿನ ಪ್ರಶ್ನೆ.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಶಿಫಾರಸ್ಸಿನಂತೆ ಸರ್ಕಾರದ ಎಲ್ಲ ಇಲಾಖೆಗಳ ಜಾಲತಾಣಗಳಲ್ಲಿ ಕನ್ನಡವು ಪ್ರಧಾನವಾಗಿ ಬಳಕೆಯಾಗಬೇಕು. ಪ್ರಾಧಿಕಾರದ ಶಿಫಾರಸ್ಸಿನಲ್ಲಿ ಎರಡು ಮುಖ್ಯ ಅಂಶಗಳಿವೆ. ಒಂದು, ಎಲ್ಲ ಇಲಾಖೆಗಳ ಜಾಲತಾಣಗಳಲ್ಲಿನ ಮಾಹಿತಿಗಳು ಇಂಗ್ಲಿಷ್‌ನ ಜೊತೆಗೆ ಕನ್ನಡದಲ್ಲಿಯೂ ಇರಬೇಕು. ಎರಡು, ಪ್ರತಿಯೊಂದೂ ಇಲಾಖೆಗಳ ಜಾಲತಾಣಕ್ಕೆ ಭೇಟಿನೀಡಿದಾಗ ಮುಖಪುಟ ಕನ್ನಡದಲ್ಲಿಯೇ ತೆರೆದುಕೊಳ್ಳಬೇಕು. ಅಗತ್ಯವಿರುವವರು ‘ಇಂಗ್ಲಿಷ್’ ಎಂಬುದನ್ನು ಕ್ಲಿಕ್‌ಮಾಡಿ ಇಂಗ್ಲಿಷ್ ಭಾಷೆಯಲ್ಲಿ ಮಾಹಿತಿಗಳನ್ನು ನೋಡುವಂತಿರಬೇಕು. ಕರ್ನಾಟಕ ಸರ್ಕಾರದ ಅಧಿಕೃತ ಜಾಲತಾಣಕ್ಕೆ ಭೇಟಿನೀಡಿದರೆ <http://www.karnataka.gov.in> ಅದು ಕನ್ನಡದಲ್ಲಿಯೇ ತೆರೆದುಕೊಳ್ಳುತ್ತದೆ. ಅಗತ್ಯವಿದ್ದರೆ ನಂತರ ‘ENGLISH’ ಎಂಬುದನ್ನು ಕ್ಲಿಕ್‌ಮಾಡಬಹುದು. ಇಲ್ಲಿ “ಕರ್ನಾಟಕ ಸರ್ಕಾರದ ಅಧಿಕೃತ ಅಂತರ್ಜಾಲ” ಎಂಬ ಸಾಲು ಗಮನಸೆಳೆಯುತ್ತದೆ. ಇಂಟರ್‌ನೆಟ್ ಪದವನ್ನು ಕನ್ನಡದಲ್ಲಿ ‘ಅಂತರ್ಜಾಲ’ ಎಂದು ಬಳಸಲಾಗುತ್ತದೆ. ಅಂತರ್ಜಾಲ ಎಂಬುದಕ್ಕೆ ಯಾರೂ ಮಾಲಕರಿಲ್ಲ. ಹೀಗಾಗಿ, ಅಂತರ್ಜಾಲ ಕರ್ನಾಟಕ ಸರ್ಕಾರದ್ದೂ ಅಲ್ಲ!. ಅಲ್ಲಿ ‘ಅಂತರ್ಜಾಲ’ ಎಂಬುದು ‘ಜಾಲತಾಣ’ ಎಂದಾಗಬೇಕಿತ್ತು. ವೆಬ್‌ಸೈಟ್ ಎಂಬುದಕ್ಕೆ ಕನ್ನಡದಲ್ಲಿ ‘ಜಾಲತಾಣ’ ಎಂದು ಎಲ್ಲೆಡೆ ವ್ಯಾಪಕ ಬಳಕೆಯಲ್ಲಿದೆ. ಇಂತಹ ಜಾಲತಾಣಗಳ ಸೃಜನೆ ಮತ್ತು ನಿರ್ವಹಣೆಯಲ್ಲಿ ಪ್ರಮುಖ ಪಾತ್ರವಿರುವ ‘ಇ-ಆಡಳಿತ ಕೇಂದ್ರ’ (ಸೆಂಟರ್ ಫಾರ್ ಇ-ಗೌರ್ನೆನ್ಸ್) ಇದರತ್ತ ಗಮನಹರಿಸಬೇಕಿದೆ.
ಅದು ಹಾಗಿರಲಿ, ಆಡಳಿತದಲ್ಲಿ ಡಿಜಿಟಲ್ ಕನ್ನಡ ಅನುಷ್ಠಾನದ ವಿಚಾರಕ್ಕೆ ಬರೋಣ. ಎಲ್ಲಾ ಇಲಾಖೆಗಳ ಜಾಲತಾಣಗಳಿಗೆ ಹೋಗಲು ಬೇಕಾದ ಕೊಂಡಿಗಳನ್ನು ಸರ್ಕಾರದ ಅಧಿಕೃತ ಜಾಲತಾಣದಲ್ಲಿ ನೀಡಲಾಗಿದೆ. ಬಹುತೇಕ ಇಲಾಖೆಗಳು ಪ್ರಾಧಿಕಾರದ ಶಿಫಾರಸ್ಸನ್ನು ಅನುಷ್ಠಾನಗೊಳಿಸಿವೆ. ಆದರೂ, ಹಲವು ಇಲಾಖೆಗಳ ತಾಣಗಳು ಇನ್ನೂ ಇಂಗ್ಲಿಷ್‌ನಲ್ಲಿಯೇ ಇವೆ. ಕೆಲವು ಜಾಲತಾಣಗಳ ಕೊಂಡಿ ಕ್ಲಿಕ್ಕಿಸಿದರೆ ಮೊದಲಿಗೆ ಅವು ಇಂಗ್ಲಿಷ್‌ನಲ್ಲಿಯೇ ತೆರೆದುಕೊಳ್ಳುತ್ತವೆ. ‘ಕನ್ನಡ’ ಎಂಬುದನ್ನು ಕ್ಲಿಕ್ಕಿಸಿದಾಗ ಮಾತ್ರವೇ (ಇಂಟರ್‌ಫೇಸ್ ಸಹ ಕನ್ನಡದಲ್ಲಿ ಕಂಡುಬರುತ್ತದೆ) ಕನ್ನಡದ ಮಾಹಿತಿಗಳು ಲಭ್ಯವಾಗುತ್ತವೆ. ಅಂದರೆ, ಯಾವುದೇ ಸರಕಾರೀ ಇಲಾಖೆಯ ಜಾಲತಾಣಕ್ಕೆ ಭೇಟಿನೀಡಿದರೆ ಅದರ ಮುಖಪುಟ ಮೊದಲಿಗೆ ಕನ್ನಡದಲ್ಲಿ ತೆರೆದುಕೊಳ್ಳಬೇಕು ಎಂಬ ಪ್ರಾಧಿಕಾರದ ಆಶಯವನ್ನು ಇಲ್ಲಿ ಇನ್ನೂ ಸರಿಯಾಗಿ ಅರ್ಥಮಾಡಿಕೊಂಡಿಲ್ಲ ಎಂದೇ ಹೇಳಬಹುದು. ಹಲವು ಇಲಾಖೆಗಳ ಜಾಲತಾಣಗಳಲ್ಲಿನ ಮಾಹಿತಿಗಳು ಹೆಚ್ಚಿನ ಪ್ರಮಾಣದಲ್ಲಿ ಇನ್ನೂ ಇಂಗ್ಲಿಷ್‌ನಲ್ಲಿಯೇ ಇವೆ. ಆಯ್ಕೆ ಮಾಡಿಕೊಳ್ಳಲು ‘ಕನ್ನಡ’ ಎಂದು ಹೆಸರಿಸಿ, ಅಲ್ಲಿಗೆ ಹೋದರೆ ಕನ್ನಡದಲ್ಲಿ ಏನೇನೂ ಲಭ್ಯವಿಲ್ಲದ ಜಾಲತಾಣಗಳೂ ಸಹ ಇವೆ. ಹಿಂದೆ,under construction ಎಂಬ ಸೌಜನ್ಯಯುತ ಪ್ರಕಟಣೆಗಳು ಕಾಣಿಸಿಕೊಳ್ಳುತ್ತಿದ್ದವು. ಅಂತಹ ಜಾಲತಾಣಗಳು ಕನ್ನಡ ಅನುಷ್ಠಾನದ ಹಂತದಲ್ಲಿವೆ ಎಂದಿಟ್ಟುಕೊಳ್ಳೋಣ. ಆದರೆ, ಅಂತಹ ಬಹಳಷ್ಟು ಜಾಲತಾಣಗಳ ಕನ್ನಡೀಕರಣ ಪೂರ್ಣಗೊಳ್ಳುವುದೇ ಇಲ್ಲ. ಬಹುತೇಕ ಇಲಾಖೆಗಳ ಜಾಲತಾಣಗಳಲ್ಲಿ ಹೆಸರಿಗೆ ಒಂದಷ್ಟು ಕನ್ನಡದ ಮಾಹಿತಿಯಿದ್ದರೆ, ಬಹುತೇಕ ಮಾಹಿತಿಗಳು ಇಂಗ್ಲಿಷ್‌ನಲ್ಲಿರುವುದು ಸರ್ವೇಸಾಮಾನ್ಯ.
ಸರ್ಕಾರದ ಇಲಾಖೆಗಳಲ್ಲಿ ಪಾರದರ್ಶಕ ಮತ್ತು ತ್ವರಿತ ಆಡಳಿತಕ್ಕಾಗಿ ಹಲವು ದಶಕಗಳಿಂದ ವಿದ್ಯುನ್ಮಾನ ಸೌಲಭ್ಯಗಳನ್ನು ಬಳಸಿಕೊಳ್ಳಲಾಗುತ್ತಿದೆ. “ಕಚೇರಿಗಳಲ್ಲಿ ಆಡಳಿತಕ್ಕೆ ಕಂಪ್ಯೂಟರುಗಳನ್ನು ಬಳಸುವುದು” ಮತ್ತು “ಆಡಳಿತ ಕೆಲಸಗಳನ್ನು ಸಂಪೂರ್ಣವಾಗಿ ಕಂಪ್ಯೂಟರೀಕರಣಗೊಳಿಸುವುದು” ಎಂಬ ಎರಡು ವಿಧಾನಗಳಿವೆ. ಈಗ ‘ಕಂಪ್ಯೂಟರೀಕರಣ’ ಎಂಬ ಪದ ಹಳತಾಗಿದೆ. ಏಕೆಂದರೆ, ಇಂದಿನ ವಿದ್ಯುನ್ಮಾನ ಯುಗದಲ್ಲಿ ಕೇವಲ ಕಂಪ್ಯೂಟರ್ ಮಾತ್ರ ಬಳಕೆಯಾಗುತ್ತಿಲ್ಲ. ಬದಲಾಗಿ, ಸ್ಮಾರ್ಟ್‌ಫೋನು, ಟ್ಯಾಬ್ಲೆಟ್ ಇತ್ಯಾದಿಗಳು ತಮ್ಮ ಪ್ರಾಧಾನ್ಯತೆ ಪಡೆದಿವೆ. ಹೀಗಾಗಿ, ‘ಕಂಪ್ಯೂಟರೀಕರಣ’ ಎಂಬುದರ ಬದಲಾಗಿ ‘ಡಿಜಿಟಲೀಕರಣ’ ಎಂಬ ಪದಬಳಕೆಯೇ ಸೂಕ್ತ.
ಇಂದು ಸರ್ಕಾರದ ಬಹುತೇಕ ಎಲ್ಲ ಇಲಾಖೆಗಳು ಡಿಜಿಟಲೀಕರಣಗೊಂಡಿವೆ. ಆದರೆ, ಅಂತಹ ಡಿಜಿಟಲೀಕರಣ ಕನ್ನಡದಲ್ಲಿಯೇ ಆಗಿದೆಯೇ? ಇಲ್ಲ. ಕನ್ನಡದಲ್ಲಿ ಏಕೆ ಆಗಿಲ್ಲ ಎಂಬ ಪ್ರಶ್ನೆಗೆ ಉತ್ತರಗಳನ್ನು ಹುಡುಕುತ್ತಾ ಹೊರಟರೆ ಹಲವು ಅಂಶಗಳು ಕಂಡುಬರುತ್ತವೆ. ಅವುಗಳಲ್ಲಿ ತಂತ್ರಜ್ಞಾನದ ಸಮಸ್ಯೆಗಳಿಗಿಂತ ಇಚ್ಛಾಶಕ್ತಿಯ ಕೊರತೆಯೇ ಎದ್ದು ಕಾಣುತ್ತದೆ. ಭೂದಾಖಲೆಗಳ ಗಣಕೀಕರಣಕ್ಕಾಗಿ ‘ಭೂಮಿ’ ಎಂಬ ತಂತ್ರಾಂಶವನ್ನು ಎರಡು ದಶಕಗಳ ಹಿಂದೆಯೇ ಕನ್ನಡದಲ್ಲಿ ಸಿದ್ಧಪಡಿಸಲು ಸಾಧ್ಯವಾಗುವುದಾದರೆ, ಕಾಲಕಾಲಕ್ಕೆ ಆವಿಷ್ಕಾರಗೊಂಡ ತಂತ್ರಜ್ಞಾನವನ್ನು ಬಳಸಿಕೊಂಡು ಸರ್ಕಾರದ ಇಲಾಖೆಗಳ ಗಣಕೀಕರಣವನ್ನು ಕನ್ನಡದಲ್ಲಿಯೇ ಮಾಡಲು ಸಾಧ್ಯವಿರಲಿಲ್ಲವೇ? ಎಂಬ ಪ್ರಶ್ನೆ ಹಾಗಿಯೇ ಉಳಿದಿದೆ.
ಇಚ್ಛಾಶಕ್ತಿಯ ಮುಂದೆ ಸಮಸ್ಯೆಗಳು ನಿಲ್ಲುವುದಿಲ್ಲ. ಇಚ್ಛಾಶಕ್ತಿಯಿದ್ದಲ್ಲಿ ಸಮಸ್ಯೆಗಳಿಗೆ ಪರಿಹಾರಗಳು ಕಾಣುತ್ತವೆ. ಅಡ್ಡಿ-ಆತಂಕಗಳು ನಿವಾರಣೆಗೊಳ್ಳುತ್ತವೆ. ಇಚ್ಛಾಶಕ್ತಿಯಿಲ್ಲದಿದ್ದರೆ ಇಲ್ಲಸಲ್ಲದ ಕುಂಟು ನೆಪಗಳೇ ಮುಖ್ಯವಾಗುತ್ತವೆ. ಚಿಕ್ಕಪುಟ್ಟ ಸಮಸ್ಯೆಗಳು ಬೃಹದಾಕಾರವಾಗಿ ಕಾಣುತ್ತವೆ. ಇಂತಹ ಮಾತುಗಳು ಡಿಜಿಟಲ್ ಕನ್ನಡದ ಅನುಷ್ಠಾನ ಕಾರ್ಯದಲ್ಲಿಯೂ ಸಹ ಅನ್ವಯಿಸುತ್ತವೆ. ಕಂಪ್ಯೂಟರುಗಳೂ ಸೇರಿದಂತೆ ಎಲ್ಲ ಡಿಜಿಟಲ್ ಸಾಧನಗಳಲ್ಲಿ ಈಗ ಕನ್ನಡ ಬಳಕೆ ಸಾಧ್ಯ ಎಂದು ತಿಳಿದಿದ್ದರೂ, ಬಹುತೇಕರಿಗೆ ಬಳಸುವ ಮನಸ್ಸು ಇಲ್ಲ. ಬಹುಮುಖ್ಯವಾಗಿ, ಡಿಜಿಟಲ್ ಸಾಧನ-ಸಲಕರಣೆಗಳನ್ನು ಕನ್ನಡದಲ್ಲಿಯೇ ಬಳಸಬೇಕು ಎಂಬ ಇಚ್ಛಾಶಕ್ತಿಯ ಕೊರತೆ ಎಲ್ಲೆಡೆಯಲ್ಲಿಯೂ ಸರ್ವೇಸಾಮಾನ್ಯವಾಗಿದೆ.
ಜಾಲತಾಣದ ವಿಚಾರದಲ್ಲಿ ಇಂಗ್ಲಿಷ್ ಮತ್ತು ಕನ್ನಡ ಎರಡನ್ನೂ ಸಹ ಬಳಸಿ ತಾಣವನ್ನು ಸೃಜಿಸಬಹುದು. ಆದರೆ, ಇಲಾಖಾ ಕೆಲಸಕಾರ್ಯಗಳ ಕಂಪ್ಯೂಟರೀಕರಣದ ವಿಚಾರದಲ್ಲಿ ಆಡಳಿತಗಾರರಿಗೆ ಎರಡು ದಾರಿಗಳಿವೆ. ಒಂದು, ಕನ್ನಡವನ್ನೇ ಬಳಸಿ ಕಂಪ್ಯೂಟರೀಕರಣ (ಡಿಜಿಟಲೀಕರಣ) ಮಾಡುವ ಅನಿವಾರ್ಯತೆ. ಮತ್ತೊಂದು, ಕನ್ನಡದ ಅಗತ್ಯವೇ ಇಲ್ಲದೆ ಎಲ್ಲವೂ ಇಂಗ್ಲಿಷ್‌ನಲ್ಲಿಯೇ ಮಾಡಿದರೆ ನಡೆಯುತ್ತದೆ ಎಂಬ ಧೋರಣೆ. ಇಂದು, ಬಹುತೇಕ ಸರ್ಕಾರೀ ಡಿಜಿಟಲೀಕರಣದಲ್ಲಿ ಕನ್ನಡದ ಅನುಷ್ಠಾನಕ್ಕೆ ಬಹುದೊಡ್ಡ ನೆಪ ಎಂದರೆ “ತಂತ್ರಜ್ಞಾನದ ಸಮಸ್ಯೆಗಳು”. ಆದರೆ, ರೈತರಿಗೆ ಕನ್ನಡದಲ್ಲಿಯೇ ತಲುಪಬೇಕಾದ ‘ಭೂಮಿ’ಯಂತಹ ಅನಿವಾರ್ಯ ತಂತ್ರಾಂಶಗಳಲ್ಲಿ ಇಂತಹ ನೆಪಗಳು, ತಂತ್ರಜ್ಞಾನದ ಸಮಸ್ಯೆಗಳು ಅಡ್ಡಿಯಾಗದಿರುವುದು ವಿಶೇಷ!. ಅಂದರೆ, ಇಲ್ಲಿ ತಂತ್ರಜ್ಞಾನದ ಕೊರತೆಗಿಂತ ಇಚ್ಛಾಶಕ್ತಿಯ ಕೊರತೆಯೇ ಎದ್ದುಕಾಣುತ್ತದೆ ಎಂಬುದು ಸತ್ಯ.
ಕರ್ನಾಟಕದಲ್ಲಿ ಕನ್ನಡವೇ ಆಡಳಿತ ಭಾಷೆ. ಎಲ್ಲೆಲ್ಲಿ ಅನಿವಾರ್ಯವಾಗಿ ಗಣಕೀಕರಣ ಅಗತ್ಯವಾಗಿದೆಯೋ ಅಲ್ಲೆಲ್ಲಾ ಗಣಕೀಕರಣವನ್ನು ಸಾಮಾನ್ಯವಾಗಿ ಇಂಗ್ಲಿಷ್ ಭಾಷೆಯಲ್ಲಿಯೇ ಮಾಡಲಾಗಿದೆ. ಕಂಪ್ಯೂಟರ್ ಕ್ಷೇತ್ರದಲ್ಲಿ ಆಗುತ್ತಿರುವ ಶೀಘ್ರ ಬದಲಾವಣೆಗಳು ಮತ್ತು ಕಚೇರಿಗಳ ಆಧುನೀಕರಣದ ಹೆಸರಿನಲ್ಲಿ ಕೆಲಸಕಾರ್ಯಗಳ ಗಣಕೀಕರಣದಲ್ಲಿ ಕನ್ನಡದ ಸ್ಥಾನಮಾನ ಏನು ಎನ್ನುವ ಬಗ್ಗೆ ಸೂಕ್ತ ನಿರ್ಣಯಗಳನ್ನು ಕೈಗೊಂಡು ಜಾರಿಗೊಳಿಸುವುದು ಅತ್ಯಗತ್ಯ. ಇತರ ರಾಜ್ಯಗಳಲ್ಲಿ ಆಯಾ ರಾಜ್ಯಗಳ ಭಾಷೆಗಳೇ ಎಲ್ಲೆಡೆ ಸಹಜವಾಗಿ ಪಡೆಯಬೇಕಾದ ಸ್ಥಾನಮಾನಗಳನ್ನೂ ಗಳಿಸಿಕೊಂಡು ಪ್ರಗತಿಯಪಥದಲ್ಲಿವೆ. ನೆರೆಯ ರಾಜ್ಯಗಳಿಗೆ ಹೋಲಿಸಿದರೆ, ತನ್ನ ಪ್ರಾದೇಶಿಕ, ಆಡಳಿತ ಮತ್ತು ಜನಸಮುದಾಯದ ಭಾಷೆಯಾಗಿರುವ ಕನ್ನಡವನ್ನು ಡಿಜಿಟಲ್ ಕ್ಷೇತ್ರದಲ್ಲಿ ಅನುಷ್ಠಾನಗೊಳಿಸುವಲ್ಲಿ ಕರ್ನಾಟಕ ತುಂಬಾ ಹಿಂದುಳಿದಿದೆ. ತಾಂತ್ರಿಕ ಕ್ಷೇತ್ರಗಳಲ್ಲಿಯೂ ಪ್ರಾದೇಶಿಕ ಭಾಷೆಗಳನ್ನು ಉಳಿಸಿ ಬೆಳೆಸದಿದ್ದರೆ ಪ್ರಾದೇಶಿಕ ಭಾಷೆಗಳು ನಶಿಸಿಹೋಗುತ್ತವೆ ಎಂಬುದು ಜಾಗತಿಕವಾಗಿ ಒಪ್ಪಲಾಗಿರುವ ಅಭಿಪ್ರಾಯ. ಡಿಜಿಟಲ್ ಕ್ಷೇತ್ರದಲ್ಲಿ ಕನ್ನಡದ ಬಳಕೆಯನ್ನು ಉಳಿಸಿಕೊಳ್ಳದಿದ್ದರೆ, ಕನ್ನಡವೂ ಸಹ ಕೇವಲ ಆಡುಭಾಷೆಯ ಮಟ್ಟಕ್ಕೆ ಇಳಿಯುತ್ತದೆ. ಕರ್ನಾಟಕದಲ್ಲಿ ಕನ್ನಡವೇ ಆಡಳಿತ ಭಾಷೆ. ಕರ್ನಾಟಕ ರಾಜ್ಯ ಸರಕಾರದ ವಿವಿಧ ಇಲಾಖೆಗಳು, ಮಂಡಳಿಗಳು, ನಿಗಮಗಳು, ಸ್ವಾಯುತ್ತ ಸಂಸ್ಥೆಗಳು, ಕಾರ್ಖಾನೆಗಳು ಇತ್ಯಾದಿಗಳ ಆಡಳಿತ ಮತ್ತು ಇತರ ಕೆಲಸ ಕಾರ್ಯಗಳು ಕಡ್ಡಾಯವಾಗಿ ಕನ್ನಡದಲ್ಲಿಯೇ ನಡೆಯಬೇಕಾದುದು ಅಗತ್ಯ ಮತ್ತು ಅನಿವಾರ್ಯ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ