ವಿಷಯಕ್ಕೆ ಹೋಗಿ

15. ತಂತ್ರಜ್ಞಾನದ ಸವಾಲುಗಳನ್ನು ಎದುರಿಸಿ ಸಿದ್ಧಗೊಂಡ ಕನ್ನಡದ ‘ಟೆಕ್ಸ್ಟ್ಎಡಿಟರ್’ ತಂತ್ರಾಂಶಗಳು


       ಕಂಪ್ಯೂಟರ್ ತಂತ್ರಜ್ಞಾನವು ಭಾರತಕ್ಕೆ ಕಾಲಿರಿಸಿದ ಎಂಭತ್ತರ ದಶಕದಲ್ಲಿ ಇಂಗ್ಲಿಷ್‌ನ್ನು ಟೈಪ್‌ಮಾಡಿ ಪ್ರಿಂಟ್ ಮಾಡಿಕೊಳ್ಳಬಹುದಾದ ಪಠ್ಯಸಂಪಾದನಾ ತಂತ್ರಾಂಶಗಳು’ (‘ಟೆಕ್ಸ್ಟ್-ಎಡಿಟಿಂಗ್ ಸಾಫ್ಟ್‌ವೇರ್) ಬಳಕೆಗೆ ಬಂದವು. ಕಂಪ್ಯೂಟರಿನಲ್ಲಿ ಸಹಜ ಭಾಷೆಯ ಬಳಕೆ ಆರಂಭಗೊಂಡಿದ್ದೇ ಇಂತಹ ಟೆಕ್ಸ್ಟ್ ಎಡಿಟರ್ಗಳ ಮೂಲಕ. ಪತ್ರಿಕೆಗಳು ಮತ್ತು ಪುಸ್ತಕ ಪ್ರಕಾಶಕರು ಮುದ್ರಣಕ್ಕಾಗಿ ಅಕ್ಷರಜೋಡಣೆಗೆ ಫೋಟೋಕಂಪೋಸಿಂಗ್ತಂತ್ರಜ್ಞಾನವನ್ನು ಬದಿಗಿರಿಸಿ ಇಂತಹ ಟೆಕ್ಟ್-ಎಡಿಟರ್‌ಗಳನ್ನು ಬಳಸಲಾರಂಭಿಸಿದರು. ಆಗಲೇ ಕನ್ನಡಾಭಿಮಾನಿ ವಿಜ್ಞಾನಿ, ತಂತ್ರಜ್ಞರು, ಮುದ್ರಣಕಾರರು ಕಂಪ್ಯೂಟರಿನಲ್ಲಿ ಕನ್ನಡದ ಲಿಪಿಗಳಿಗಾಗಿ ಹುಡುಕಾಡತೊಡಗಿದರು. ವಿದೇಶಿ ತಂತ್ರಜ್ಞಾನದಲ್ಲಿ ಕನ್ನಡವನ್ನು ಅಳವಡಿಸುವುದು ಕನ್ನಡಿಗ ತಂತ್ರಜ್ಞರದೇ ಹೊಣೆಗಾರಿಕೆಯಾಯಿತು.  ಕನ್ನಡವನ್ನು ಕಂಪ್ಯೂಟರಿಗೆ ಅಳವಡಿಸುವಲ್ಲಿನ ಸವಾಲುಗಳ ಕುರಿತು ಮಾತನಾಡುತ್ತಿದ್ದ ವಿಜ್ಞಾನಿಯೊಬ್ಬರಿಗೆ ಖ್ಯಾತ ವಿಚಾರವಾದಿ, ಸಾಹಿತಿ ಎಚ್.ನರಸಿಂಹಯ್ಯನವರು, “ಇದಕ್ಕೆ ಚಿಂತೆ ಏಕೆ? ನಿಮ್ಮ ಕಂಪ್ಯೂಟರಿನಲ್ಲಿ ಇಂಗ್ಲಿಷ್ ಅಕ್ಷರಗಳ ಜಾಗದಲ್ಲಿ ಕನ್ನಡದ ಅಕ್ಷರಗಳನ್ನು ಕೂರಿಸಿದರೆ ಆಯಿತುಎಂದರಂತೆ.   ಬೆರಳಚ್ಚುಯಂತ್ರದಲ್ಲಿ (ಟೈಪ್‌ರೈಟರ್) ಕನ್ನಡವನ್ನು ಅಳವಡಿಸುವಾಗ ಅನುಸರಿಸಿದ ತಂತ್ರವನ್ನು ಅವರು ಅಂದು ನೆನಪಿಸಿದರು. ಆದರೆ, ಕನ್ನಡವನ್ನು ಕಂಪ್ಯೂಟರಿಗೆ ಅಳವಡಿಸುವುದು ಅಷ್ಟೊಂದು ಸುಲಭದ ಕೆಲಸವಾಗಿರಲಿಲ್ಲ. ಕಂಪ್ಯೂಟರ್ ಎಂಬುದು ಟೈಪ್‌ರೈಟರ್ ಅಲ್ಲ. ಅಂದು, ಕನ್ನಡಕ್ಕೆ ಪ್ರತ್ಯೇಕ ಟೆಕ್ಸ್ಟ್-ಎಡಿಟರ್‌ಗಳನ್ನು ಸಿದ್ಧಪಡಿಸುವಲ್ಲಿ ತಂತ್ರಜ್ಞಾನದ ಹಲವಾರು ಸವಾಲುಗಳಿದ್ದವು.

       ಮುದ್ರಣ ಮತ್ತು ಕಂಪ್ಯೂಟರ್ ತಂತ್ರಜ್ಞಾನ ಪರಿಣಿತ ಕನ್ನಡಿಗರು ತಂತ್ರಜ್ಞಾನಗಳ ಸವಾಲುಗಳನ್ನು ಎದುರಿಸಿ ಕನ್ನಡವನ್ನು ಕಂಪ್ಯೂಟರಿಗೆ ಅಳವಡಿಸುವ ಸಾಹಸಕ್ಕೆ ಕೈಹಾಕಿದರು. ಇಂಗ್ಲಿಷ್‌ಗೆ ಹೋಲಿಸಿದರೆ, ಕನ್ನಡದ ಮೂಲಾಕ್ಷರಗಳ ಸಂಖ್ಯೆ ಹೆಚ್ಚು. ಆಗ ಲಿಪಿಅಳವಡಿಕೆಗಾಗಿ ಇದ್ದ ಎನ್‌ಕೋಡಿಂಗ್ ವ್ಯವಸ್ಥೆಯಲ್ಲಿ ಕೇವಲ ೧೨೮ ಅಕ್ಷರಗಳಿಗೆ ಮಾತ್ರವೇ ಅವಕಾಶವಿತ್ತು.         ಕನ್ನಡ ಅಕ್ಷರಗಳಿಗೆ ಲಿಪಿಸಂಕೇತಗಳನ್ನು (ಎನ್‌ಕೋಡಿಂಗ್) ನಿಗದಿಪಡಿಸುವುದು ಒಂದು ಸಮಸ್ಯೆಯಾಗಿತ್ತು. ಇಂಗ್ಲಿಷ್‌ಲಿಪಿಯ ಎನ್‌ಕೋಡಿಂಗ್ ಪದ್ಧತಿಯಂತೆ,  ಪ್ರತಿಯೊಂದೂ ಕನ್ನಡದ ಮೂಲಾಕ್ಷರ, ಸಂಯುಕ್ತಾಕ್ಷರ ಮತ್ತು ಒತ್ತಕ್ಷರಗಳಿಗೆ ಒಂದೊಂದು ಸಂಕೇತಗಳನ್ನು ನೀಡುವುದು ಅಸಾಧ್ಯವಾಗಿತ್ತು. ಕನ್ನಡದ ಒತ್ತಕ್ಷರಗಳು ಪರದೆಯ ಮೇಲೆ ಸ್ಪಷ್ಟವಾಗಿ ಕಾಣಿಸುವಂತೆ ಮೂಡಿಸುವುದು ದೊಡ್ಡ ಸಮಸ್ಯೆಯಾಗಿತ್ತು. ಮೂಲಾಕ್ಷರಗಳು, ಸಂಯುಕ್ತಾಕ್ಷರಗಳು ಮತ್ತು ಒತ್ತಕ್ಷರಗಳಿಂದ ಕೂಡಿದ ಕನ್ನಡ ಲಿಪಿಯನ್ನು ಬೆರಳಚ್ಚಿಸಲು ಅವಕಾಶ ಕಲ್ಪಿಸುವ ಕೀಲಿಮಣೆ ವಿನ್ಯಾಸವನ್ನು ರಚಿಸುವುದು ಬಹುದೊಡ್ಡ ಸಮಸ್ಯೆಯಾಗಿತ್ತು.

       ಕನ್ನಡದ ಎಡಿಟರ್ ತಂತ್ರಾಂಶಗಳನ್ನು ಸಿದ್ಧಪಡಿಸುವಾಗ, ಇಂಗ್ಲಿಷ್‌ನ ಎನ್‌ಕೋಡಿಂಗ್ ವ್ಯವಸ್ಥೆಯನ್ನೇ ಕನ್ನಡಕ್ಕೂ ಅಳವಡಿಸಿರುವುದು ಒಂದು ಯಶಸ್ವೀ ಪ್ರಯೋಗವಾಗಿದೆ. ಲಭ್ಯವಿದ್ದ ೧೨೮ ಅಕ್ಷರಸ್ಥಾನಗಳಲ್ಲಿ ಇಂಗ್ಲಿಷ್‌ನ ಅಕ್ಷರಗಳನ್ನು ಉಳಿಸಿಕೊಂಡು ಕನ್ನಡದ ಎಲ್ಲ ಅಕ್ಷರಗಳಿಗಾಗಿ ಜಾಗವನ್ನು ಮಾಡಿಕೊಂಡಿದ್ದು ಕುತೂಹಲಕರ ಕಥೆಯೇ ಆಗಿದೆ.  ಕನ್ನಡದ ಅಕ್ಷರಗಳನ್ನು ಬಿಡಿ ಭಾಗಗಳನ್ನಾಗಿಸಿ ವಿಭಾಗಿಸಿಕೊಂಡು, ಅಂದಿನ ಕೋಡ್‌ಪೇಜ್‌ನಲ್ಲಿ ಲಭ್ಯವಿದ್ದ ಕನಿಷ್ಠ ಸಂಖ್ಯೆಯ ಅಕ್ಷರಸ್ಥಾನಗಳಿಗೆ ಅಳವಡಿಸಲಾಯಿತು. ಅಕ್ಷರಗಳನ್ನು ತುಂಡುಗಳನ್ನಾಗಿ ಕತ್ತರಿಸಿಕೊಂಡು ಬಳಸುವ ಈ ತಂತ್ರವು ಹೊಸದೇನಲ್ಲ, ಹಿಂದೆ ಲೆಟರ್‌ಪ್ರೆಸ್ ಎಂದು ಕರೆಯಲಾಗುವ ಮುದ್ರಣ ತಂತ್ರಜ್ಞಾನದಲ್ಲಿ ಸೀಸದಲ್ಲಿ ಎರಕ ಹೊಯ್ದ ಅಕ್ಷರಭಾಗಗಳನ್ನೇ ಜೋಡಿಸಿ ಪೂರ್ಣಾಕ್ಷರಗಳನ್ನಾಗಿ ಸಂಯೋಜಿಸಿಕೊಳ್ಳುವ ಕ್ರಮಗಳು ಬಳಕೆಯಲ್ಲಿದ್ದವು. ಇದೇ ತಂತ್ರವನ್ನು ಕಂಪ್ಯೂಟರ್‌ನಲ್ಲಿಯೂ ಸಹ ಅಳವಡಿಸಿಕೊಳ್ಳಯಿತು. 

       ಇರುವ ಇಂಗ್ಲಿಷ್‌ನ ಕೀಲಿಮಣೆಯನ್ನೇ ಬಳಸಿ ಕನ್ನಡವನ್ನು ಮೂಡಿಸುವ ಸವಾಲು ಬಗೆಹರಿಸಿಕೊಂಡ ಕಥೆಯೂ ಕುತೂಹಲಕರವೇ. ಇಂಗ್ಲಿಷ್‌ನ ಂ ಅಕ್ಷರವನ್ನು ಹೊಂದಿರುವ ಕೀಲಿಯನ್ನು ಬಳಕೆದಾರ ಒತ್ತಿದಾಕ್ಷಣ ಅದೇ ಅಕ್ಷರವು ಕಂಪ್ಯೂಟರಿನೊಳಗೆ ಊಡಿಕೆಯಾಗುವುದಿಲ್ಲ. ಬದಲಾಗಿ, ಸ್ಕ್ಯಾನ್‌ಕೋಡ್ ಮೂಲಕ ಅಕ್ಷರಗಳು ಪರದೆಯಲ್ಲಿ ಮೂಡುತ್ತವೆ. ಕನ್ನಡಲಿಪಿ ಮೂಡಿಕೆಗಾಗಿ ಹಲವು ಕೀಲಿಗಳನ್ನು ಒತ್ತುವ ಮೂಲಕ ಅಕ್ಷರದ ತುಂಡುಗಳು (ಗ್ಲಿಫ್) ಪೂರ್ಣಾಕ್ಷರಗಳಾಗಿ ಜೋಡಣೆಗೊಂಡು ಪರದೆಯಲ್ಲಿ ಮೂಡುವ ರೆಂಡರಿಂಗ್ವ್ಯವಸ್ಥೆಯನ್ನು ರೂಪಿಸಲಾಯಿತು. ಈ ಕಾರ್ಯತಂತ್ರದ  ಮೂಲಕ ಸೂಕ್ತ ರೀತಿಯಲ್ಲಿ ಕನ್ನಡಲಿಪಿಯು ಮೂಡುವಂತೆ ತಂತ್ರಾಶವನ್ನು ಸಿದ್ಧಪಡಿಸುವಲ್ಲಿ ತಂತ್ರಜ್ಞರು ಯಶಸ್ವಿಯಾದರು.  ಒತ್ತಕ್ಷರಗಳು ಕಪ್ಪುಬಿಳುಪಿನ ಪರದೆಯಲ್ಲಿ ಸ್ಪಷ್ಟವಾಗಿ ಕಾಣುತ್ತಿರಲಿಲ್ಲ. ಅದಕ್ಕಾಗಿ ಅಕ್ಷರಗಳ ಗಾತ್ರವನ್ನೇ ದೊಡ್ಡದಾಗಿ ಮೂಡುವಂತೆ ಮಾಡಲಾಯಿತು. ಆಗ ಕನ್ನಡವನ್ನು ಪರದೆಯ ಮೇಲೆ ಓದುವುದು ಸುಲಭವಾಯಿತು.

       ತಂತ್ರಜ್ಞರು ಇಂಗ್ಲಿಷ್ ಕೀಲಿಮಣೆಯ ಬದಲಾಗಿ, ಕನ್ನಡಕ್ಕೆ ಹೊಂದಿಕೊಳ್ಳುವ ಪ್ರತ್ಯೇಕ ಕೀಲಿಮಣೆಯನ್ನು ತಯಾರಿಸಲಿಲ್ಲ. ಅದು, ಕಾರ್ಯಸಾಧ್ಯವೂ ಆಗಿರಲಿಲ್ಲ. ಬದಲಾಗಿ, ಇಂಗ್ಲಿಷ್ ಕೀಲಿಮಣೆ ವಿನ್ಯಾಸದಲ್ಲಿ ಇರುವ ಇತರೆ ಚಿನ್ಹೆಗಳ ಕೀಲಿಗಳನ್ನೂ ಸಹ ಕನ್ನಡದ ಅಕ್ಷರಗಳ ಮೂಡಿಕೆಗೆ ಬಳಸಲಾಯಿತು. ಬೆರಳಚ್ಚು ಯಂತ್ರದಲ್ಲಿ ಇರುವಂತೆ, ಒಂದು ಪೂಣಾಕ್ಷರವು ಮೂಡಲು ಹಲವು ಕೀಲಿಗಳನ್ನು ಒತ್ತುವಂತೆ ವಿನ್ಯಾಸವನ್ನು ರೂಪಿಸಲಾಯಿತು. ಹೀಗೆ, ಕಡಮೆ ಕೀಲಿಗಳ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಯಿತು. ಟೈಪ್‌ರೈಟರ್‌ಗೆ ಬದಲಾಗಿ ಆವಿಷ್ಕಾರಗೊಂಡ ಈ ಟೆಕ್ಸ್ಟ್ ಎಡಿಟರ್ಗಳನ್ನು ಬಳಸುವವರು ಟೈಪಿಸ್ಟ್‌ಗಳೇ ಆಗಿದ್ದರಿಂದ, ಟೈಪ್‌ರೈಟರ್‌ನಲ್ಲಿದ್ದಂತೆಯೇ ಕೀಲಿಮಣೆ ವಿನ್ಯಾಸವನ್ನು (ಕೀಬೋರ್ಡ್ ಡಿಸೈನ್) ಅನ್ನು ರೂಪಿಸಲಾಯಿತು. ಕನ್ನಡದ ಟೆಕ್ಸ್ಟ್-ಎಡಿಟರ್ಗಳಲ್ಲಿಯೂ ಕನ್ನಡ ಟೈಪ್‌ರೈಟರ್’ (ಅನಂತ ಕೀಲಿಮಣೆ ವಿನ್ಯಾಸ) ವಿನ್ಯಾಸವನ್ನೇ ಅಳವಡಿಸಲಾಯಿತು.

       ಕೆಲವು ತಜ್ಞರು ತಾವು ಸಿದ್ಧಪಡಿಸಿದ ಕನ್ನಡದ ಟೆಕ್ಸ್ಟ್-ಎಡಿಟರ್ಗಳನ್ನು ತಮ್ಮ ಬಳಕೆಗೆ ಮಾತ್ರವೇ ಇಟ್ಟುಕೊಂಡರು, ಮತ್ತೆ ಕೆಲವರು, ಅವುಗಳನ್ನು ಎಲ್ಲ ಕನ್ನಡಿಗರಿಗೆ ಉಚಿತವಾಗಿ ಬಳಸಲು ನೀಡಿದರು. ಕಾಲಕ್ರಮೇಣ, ಸರ್ಕಾರಿ ಕಚೇರಿಗಳ ಬಳಕೆಗೆ ಹಾಗೂ ವೃತ್ತಿಪರ ಬಳಕೆಗಾಗಿ ಕಂಪನಿಗಳ ಮೂಲಕ ಸಿದ್ಧಪಡಿಸಿದ ಉತ್ತಮ ಸೌಲಭ್ಯವುಳ್ಳ ಕನ್ನಡದ ಎಡಿಟರ್ ತಂತ್ರಾಂಶಗಳು ಮಾರುಕಟ್ಟೆಗೆ ಬಂದವು.   ಸ್ವಂತ ಬಳಕೆಗೆ ಎಡಿಟರ್ ತಂತ್ರಾಂಶವನ್ನು ಸಿದ್ಧಪಡಿಸಿಕೊಂಡು, ಕನ್ನಡ ಲಿಪಿವ್ಯವಸ್ಥೆಯನ್ನು ತಯಾರಿಸಿಕೊಂಡ ವರ್ಗದಲ್ಲಿ ಅಮೇರಿಕಾದ ಡಾ||ಕಸ್ತೂರಿ ರಂಗಾಚಾರ್ ಮೊದಲಿಗರು. ಅಮೆರಿಕದಲ್ಲಿ ಪ್ರಕಟಗೊಳ್ಳುತ್ತಿದ್ದ ಅಮೆರಿಕನ್ನಡಪತ್ರಿಕೆಯ ಅಕ್ಷರಜೋಡಣಾ ಉದ್ದೇಶದಿಂದ ಕಸ್ತೂರಿಎಂಬ ಹೆಸರಿನ ಕನ್ನಡದ ಎಡಿಟರ್ ತಂತ್ರಾಂಶವನ್ನು ಮೊದಲಿಗೆ ಅವರು ೧೯೮೪-೮೫ರಲ್ಲಿ ಸಿದ್ಧಪಡಿಸಿಕೊಂಡರು. ಅಮೆರಿಕದಲ್ಲಿ ಕನ್ನಡಾಭಿಮಾನದ ಚಟುವಟಿಕೆಗಳನ್ನು ಆರಂಭಿಸಿ, ಬೆಳೆಸಿದವರಲ್ಲಿ ಅಗ್ರಗಣ್ಯರಾದ ಶಿಕಾರಿಪುರ ಹರಿಹರೇಶ್ವರರ ನೇತೃತ್ವದಲ್ಲಿ ಈ ಪತ್ರಿಕೆ ಪ್ರಕಟವಾಗುತ್ತಿತ್ತು. ಕಂಪ್ಯೂಟರ್‌ನಲ್ಲಿ ಕನ್ನಡ ಉಳಿದು ಬೆಳೆಯಲಿ ಎಂಬ ಸಾರ್ವಜನಿಕ ಉದ್ದೇಶದಿಂದ ಡಾಸ್ ವರ್ಡ್‌ಪ್ರೋಸೆಸರ್ರೂಪದಲ್ಲಿ ಕನ್ನಡದ ಟೆಕ್ಸ್ಟ್ ಎಡಿಟರ್‌ನ್ನು ಸಿದ್ಧಪಡಿಸಿ ಸಾರಸ್ವತ ಲೋಕಕ್ಕೆ ಉಚಿತವಾಗಿ ನೀಡಿದವರಲ್ಲಿ ಮೊದಲಿಗರು ನಾಡೋಜ ಡಾ.ಕೆ.ಪಿ.ರಾವ್‌ರವರು (ಕನ್ನಿಕಂಬಳ ಪದ್ಮನಾಭ ರಾವ್). ೧೯೮೮ರಲ್ಲಿ ಇವರು ತಮ್ಮ ವಿದ್ಯಾಗುರುಗಳಾದ ಸೇಡಿಯಾಪು ಕೃಷ್ಟಭಟ್ಟರ ನೆನಪಿನಲ್ಲಿ ಸೇಡಿಯಾಪುಎಂಬ ಹೆಸರಿನ ಕನ್ನಡ ತಂತ್ರಾಂಶವನ್ನು ಸಿದ್ಧಪಡಿಸಿ ಕನ್ನಡಿಗರ ಬಳಕೆಗೆ ಉಚಿತವಾಗಿ ನೀಡಿದರು. ಕನ್ನಡ ಭಾಷಾ ಟೆಕ್ಸ್ಟ್‌ಎಡಿಟರ್‌ಗಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆಯನ್ನು ಸೃಷ್ಟಿಸಿ ಮಾರಾಟವನ್ನು ಮಾಡುವ ಉದ್ದೇಶದಿಂದ ಕನ್ನಡದ ಎಡಿಟರ್‌ನ್ನು ತಯಾರಿಸಿದವರಲ್ಲಿ, ಸಾಫ್ಟ್‌ವೇರ್ ರಿಸರ್ಚ್ ಗ್ರೂಪ್‌ನ ಶ್ರೀ ಟಿ.ಎಸ್.ಮುತ್ತುಕೃಷ್ಣನ್ ಮೊದಲಿಗರು. ಇವರು ಶಬ್ದರತ್ನಎಂಬ ಎಡಿಟರ್‌ನ್ನು ೧೯೮೭ರಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಿದರು. ಇದು ಸರ್ಕಾರದ ಕಚೇರಿಗಳಲ್ಲಿ ಅಂದು ವ್ಯಾಪಕವಾಗಿ ಬಳಕೆಗೆ ಬಂದು ಜನಪ್ರಿಯವಾಯಿತು.


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

51. ಕಂಪ್ಯೂಟರ್ ಮತ್ತು ತಂತ್ರಜ್ಞಾನ : ಕನ್ನಡದಲ್ಲಿ ಪ್ರಕಟಿತ ಸಾಹಿತ್ಯದ ಒಂದು ಅವಲೋಕನ

ಕಂಪ್ಯೂಟರ್ ಕಲಿಕೆಗಾಗಿ ಹಲವಾರು ಕನ್ನಡ ಪುಸ್ತಕಗಳು ವಿವಿಧ ಕಾಲಘಟ್ಟಗಳಲ್ಲಿ ಪ್ರಕಟವಾಗಿವೆ. ೧೯೮೦ರ ದಶಕದ ಆರಂಭದಲ್ಲಿ ಕಂಪ್ಯೂಟರ್ ಕುರಿತು ಕನ್ನಡದಲ್ಲಿ ‘ ಗಣಕಯಂತ್ರಗಳು ’ ಎಂಬ ಮೊಟ್ಟಮೊದಲ ಪುಸ್ತಕವನ್ನು ರಚಿಸಿದವರು ಅಮೆರಿಕದಲ್ಲಿ ನೆಲೆಸಿದ್ದ ಶ್ರೀಮತಿ ನಳಿನಿ ಮೂರ್ತಿ. ತದನಂತರದಲ್ಲಿ , ಪ್ರಮುಖವಾಗಿ ಗುರುತಿಸಬಹುದಾದ ಪುಸ್ತಕಗಳು ಪ್ರಕಟಗೊಂಡಿವೆ. ಮಕ್ಕಳಿಗಾಗಿ ಕೆಲವು ಸಣ್ಣ ಸಣ್ಣ ಪುಸ್ತಕಗಳನ್ನು ಇನ್‌ಪೋಸಿಸ್ ಫೌಂಡೇಷನ್‌ನ ಶ್ರೀಮತಿ ಸುಧಾಮೂರ್ತಿಯವರು ರಚಿಸಿದ್ದಾರೆ. ಮೈಸೂರು ವಿಶ್ವವಿದ್ಯಾಲಯದ ಪ್ರಸಾರಾಂಗವು ೧೯೯೩ರಲ್ಲಿ ‘ ಕಂಪ್ಯೂಟರ್ ’ ಎಂಬ ಶೀರ್ಷಿಕೆಯ ಒಂದು ಪುಸ್ತಕವನ್ನು ಪ್ರಕಟಿಸಿದೆ. ಶ್ರೀ ಕೆ.ಹರಿದಾಸ ಭಟ್‌ರವರು ಇದನ್ನು ರಚಿಸಿದ್ದಾರೆ. ಕಂಪ್ಯೂಟರ್ ಕುರಿತ ವಿವರಣಾತ್ಮಕ ಅಧ್ಯಾಯಗಳು , ವಿವಿಧ ಕ್ಷೇತ್ರಗಳಲ್ಲಿ ಕಂಪ್ಯೂಟರ್ ಬಳಕೆ ಮತ್ತು ಭವಿಷ್ಯದಲ್ಲಿ ಕಂಪ್ಯೂಟರ್ ಬಳಕೆ ಕುರಿತಾಗಿ ಉಪಯುಕ್ತ ಮಾಹಿತಿಗಳು ಅದರಲ್ಲಿವೆ.           ಬೆಂಗಳೂರಿನ ಡೈನಾರಾಮ್ ಪಬ್ಲಿಕೇಷನ್ಸ್ ೧೯೯೪ರಲ್ಲಿ ‘ ಕಂಪ್ಯೂಟರ್ - ಮೂಲತತ್ವಗಳು ಮತ್ತು ಪ್ರೋಗ್ರಾಮ್ ರಚನೆ ’ ಎಂಬ ಪುಸ್ತಕವನ್ನು ಪ್ರಕಟಿಸಿದೆ. ವಿವಿಧ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕಂಪ್ಯೂಟರ್ ಶಿಕ್ಷಣವನ್ನು ನೀಡುತ್ತಿದ್ದ , ಕಂಪ್ಯೂಟರ್ ತಜ್ಞರಾದ ಪ್ರೊ || ಆರ್.ಶ್ರೀಧರ್ ಇದನ್ನು ರಚಿಸಿದ್ದಾರೆ. ಕಂಪ್ಯೂಟರ್ ಕುರ...

13. ಕಂಪ್ಯೂಟರಿನಲ್ಲಿ ಕನ್ನಡ ಟೈಪಿಂಗ್ ಕಲಿಯಬೇಕೆ? ಕನ್ನಡದ ಅಧಿಕೃತ ಕೀಲಿಮಣೆ ವಿನ್ಯಾಸ’ ಬಳಸಿ

ಕಂಪ್ಯೂಟರಿನಲ್ಲಿ ಕನ್ನಡ ಲಿಪಿತಂತ್ರಾಂಶಗಳನ್ನು ಅಳವಡಿಸಿ , ಇರುವ ಇಂಗ್ಲಿಷ್ ಕೀಬೋರ್ಡ್‌ನ್ನೇ ಬಳಸಿ ಕನ್ನಡದಲ್ಲಿ ವೇಗದ ಟೈಪಿಂಗ್‌ನ್ನು ಸುಲಭವಾಗಿ ಕಲಿಯಬಹುದು. ಇಂಗ್ಲಿಷ್‌ನ ೨೬ ಕೀಲಿಗಳನ್ನೇ ಬಳಸಿ , ನೆನಪಿನ ಶಕ್ತಿಗೆ ಹೆಚ್ಚಿನ ಒತ್ತಡವಿಲ್ಲದೆ , ತರ್ಕಬದ್ಧವಾಗಿ ಕನ್ನಡ ಭಾಷೆಯ ಪಠ್ಯವನ್ನು ಬೆರಳಚ್ಚಿಸಬಹುದಾದ ವಿನ್ಯಾಸ ಎಂದರೆ ಅದು ಕನ್ನಡದ ’ ಸ್ಟ್ಯಾಂಡರ್ಡ್ ಕೀಬೋರ್ಡ್ ಲೇಔಟ್ ’ ( ಕೆ.ಪಿ.ರಾವ್ ವಿನ್ಯಾಸ). ಇಂಗ್ಲಿಷ್‌ಕೀಲಿಗಳ ಸ್ಥಾನದಲ್ಲೇ ಕನ್ನಡ ಭಾಷೆಯ ಅಕ್ಷರ ಸ್ಥಾನಗಳನ್ನು ನಿಗದಿಪಡಿಸಿರುವ ಕಾರಣ , ಈಗಾಗಲೇ ವೇಗದ ಇಂಗ್ಲಿಷ್ ಟೈಪಿಂಗ್ ಕಲಿತವರಿಗೆ ಈ ವಿನ್ಯಾಸವನ್ನು ಬಳಸಿ ವೇಗದ ಕನ್ನಡ ಟೈಪಿಂಗ್ ಕಲಿಯುವುದು ಬಹಳ ಸುಲಭ. ಭಾರತೀಯ ಭಾಷೆಗಳ ಪಠ್ಯವನ್ನು ಸುಲಭವಾಗಿ ಬೆರಳಚ್ಚಿಸಲು ಸಾಧ್ಯವಾಗುವ ಇಂತಹ ಉತ್ತಮ ಕೀಲಿಮಣೆ ವಿನ್ಯಾಸದ ರೂವಾರಿ ಕನ್ನಡಿಗರಾದ ನಾಡೋಜ ಡಾ.ಕೆ.ಪಿ.ರಾವ್‌ರವರು.   ೧೯೯೯ರಲ್ಲಿ ಕರ್ನಾಟಕ ರಾಜ್ಯ ಸರಕಾರವು ಇದನ್ನು ‘ ಕನ್ನಡದ ಅಧಿಕೃತ ಕೀಲಿಮಣೆ ವಿನ್ಯಾಸ ’ ಎಂದು ಅಂಗೀಕರಿಸಿದೆ. ಕನ್ನಡ ಟೈಪಿಂಗ್‌ನ್ನು ಹೊಸದಾಗಿ ಕಲಿಯಬಯಸುವವರು ಇದೇ ವಿನ್ಯಾಸವನ್ನು ಕಲಿಯುವುದು ಉತ್ತಮ. ವೇಗದ ಟೈಪಿಂಗ್ ಕಲಿಯುವ ಮುನ್ನ , ಮೊದಲಿಗೆ , ಇಂಗ್ಲಿಷ್‌ನ ಯಾವ ಕೀಲಿಯನ್ನು ಒತ್ತಿದರೆ ಕನ್ನಡದ ಯಾವ ಅಕ್ಷರಗಳು ಮೂಡುತ್ತವೆ ಎಂಬ ಪ್ರಾಥಮಿಕ ಜ್ಞಾನ ಪಡೆಯಬೇಕು. ನಂತರ , ಗುಣಿತಾಕ್ಷರಗಳನ್ನು ಮತ್ತು ಒತ್ತಕ್ಷರಗಳನ್ನು ಮೂಡಿಸ...

32. ಕನ್ನಡ ತಂತ್ರಾಂಶ ಅಭಿವೃದ್ಧಿಯಲ್ಲಿ ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರ ಕಳಕಳಿ ಕಾಳಜಿಗಳು

ಪರಿಸರ ಕುರಿತ ಸಂಶೋಧನೆ ನಡೆಸಲು ಖ್ಯಾತ ಸಾಹಿತಿ ಮತ್ತು ಪರಿಸರ ಪ್ರೇಮಿ ಡಾ.ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರ ಸ್ಮರಣಾರ್ಥ ‘ ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನ ’ ಸ್ಥಾಪನೆಗೆ ಕಳೆದ ವರ್ಷದ ಬಜೆಟ್‌ನಲ್ಲಿ ಐದು ಕೋಟಿ ರೂ.ಗಳನ್ನು ಮೀಸಲಿರಿಸಲಾಗಿತ್ತು. ಅಧ್ಯಕ್ಷರು , ಸದಸ್ಯರ ನೇಮಕಾತಿಯ ಸರ್ಕಾರೀ ಆದೇಶವು ಈ ವರ್ಷ ಹೊರಬಂದು ಪ್ರತಿಷ್ಠಾನ ಅಸ್ತಿತ್ವಕ್ಕೆ ಬಂದಿದೆ. ಹಲವು ಉದ್ದೇಶಗಳನ್ನು ಹೊಂದಿರುವ ಪ್ರತಿಷ್ಠಾನವು , ಪ್ರತಿವರ್ಷ ಪರಿಸರ , ಸಾಹಿತ್ಯ , ತಂತ್ರಜ್ಞಾನ ವಿದ್ಯಾರ್ಥಿಗಳಿಗೆ ಫೆಲೋಶಿಪ್ ಮತ್ತು ವಿದ್ಯಾರ್ಥಿ ವೇತನ ನೀಡುವ ಕೆಲಸವನ್ನು ಸಹ ಮಾಡಲಿದೆ. ಪರಿಸರ , ವಿಜ್ಞಾನ ಮತ್ತು ತಂತ್ರಜ್ಞಾನದ ‘ ಕನ್ನಡ ವಿಷಯ ಸಾಹಿತ್ಯ ’ ವನ್ನು ಶ್ರೀಮಂತಗೊಳಿಸಿದ ಹೆಗ್ಗಳಿಕೆ ತೇಜಸ್ವಿಯವರಿಗೆ ಸಂದಿದೆ. ಕನ್ನಡ ತಂತ್ರಾಂಶ ಅಭಿವೃದ್ಧಿ ,   ಸಮಸ್ಯೆಗಳು ಹಾಗೂ ಪರಿಹಾರಗಳ ಕುರಿತಾಗಿ ತೇಜಸ್ವಿಯವರೊಂದಿಗೆ ಒಡನಾಡುವ ಹಲವು ಅವಕಾಶಗಳು ಈ ಅಂಕಣಕಾರನಿಗೆ ಒದಗಿಬಂದಿತ್ತು. ತೇಜಸ್ವಿಯವರಿಗೆ ಕನ್ನಡವನ್ನು ಕಂಪ್ಯೂಟರಿನಲ್ಲಿ ಸ್ವತಃ ಬಳಸಿದ ಅನುಭವವಿತ್ತು. ಅದರ ಸಮಸ್ಯೆಗಳ ಬಗ್ಗೆ ಅರಿವಿತ್ತು. ಅವುಗಳ ಪರಿಹಾರಗಳಿಗಾಗಿ ಹಲವು ಪ್ರಯತ್ನಗಳನ್ನು ಅವರು ಮಾಡಿದರು. ಕಂಪ್ಯೂಟರ್ ಸೇರಿದಂತೆ ಇತರೆ ಎಲೆಕ್ಟ್ರಾನಿಕ್ ಉಪಕರಣಗಳಲ್ಲಿ ಸಮರ್ಥವಾಗಿ ಕನ್ನಡ ಬಳಸಿ ವಿದ್ಯುನ್ಮಾನ ಮಾಧ್ಯಮದಲ್ಲಿಯೂ ಕನ್ನಡವನ್ನು ಉಳಿಸಿಬೆಳೆಸುವ ಅವಶ್ಯಕತೆಯನ್ನು ಅವರು ಮನಗಂಡಿದ್ದರು. ...