ವಿಷಯಕ್ಕೆ ಹೋಗಿ

27. ಬೇಳೂರು ಸುದರ್ಶನ ವರದಿ ಸರ್ಕಾರದ ಜಾಲತಾಣಗಳಲ್ಲಿ ಕನ್ನಡದ ಅನುಷ್ಠಾನ


       ಮೈಸೂರಿನಲ್ಲಿ ನಡೆದ ೮೩ನೆಯ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳದಲ್ಲಿ ಕೈಗೊಂಡ ಮೂರು ನಿರ್ಣಯಗಳ ಪೈಕಿ ಸಾಮಾಜಿಕ ಜಾಲತಾಣದಲ್ಲಿ ಕನ್ನಡವನ್ನು ಅನುಷ್ಠಾನಗೊಳಿಸಬೇಕುಎಂಬ ನಿರ್ಣಯವಿದೆ. ಇದು ಪತ್ರಕರ್ತರೂ ಸೇರಿದಂತೆ ಬಹುತೇಕರಿಗೆ ಅರ್ಥವಾಗದ, ಒಂದು ವಿಚಿತ್ರ ನಿರ್ಣಯ ಎನಿಸಿರಬಹುದು.  ಸಾಮಾಜಿಕ ಜಾಲತಾಣಗಳಲ್ಲಿ ಕನ್ನಡವನ್ನು ಯಾರು ಅನುಷ್ಠಾನಗೊಳಿಸಬೇಕು? ಸರ್ಕಾರವು ಅನುಷ್ಠಾನಗೊಳಿಸಬೇಕೆ? ಈಗ ಜಾಲತಾಣಗಳಲ್ಲಿ ಕನ್ನಡ ಬಳಕೆಯಾಗುತ್ತಿಲ್ಲವೇ? ಎಂಬ ಪ್ರಶ್ನೆಗಳು ಉದ್ಭವಿಸುತ್ತವೆ. ಯುನಿಕೋಡ್ ಶಿಷ್ಟತೆಯು ಜಾರಿಗೊಂಡ ನಂತರದಲ್ಲಿ ಕನ್ನಡವನ್ನು ಸ್ಮಾರ್ಟ್‌ಫೋನ್ ಮತ್ತು ಕಂಪ್ಯೂಟರ್‌ಗಳಲ್ಲಿ ಯಶಸ್ವಿಯಾಗಿ ಬಳಸಲು ಸಾಧ್ಯವಾಗಿದೆ. ಕನ್ನಡಾಭಿಮಾನಿಗಳು ಕನ್ನಡವನ್ನು ಸಾಮಾಜಿಕ ಜಾಲತಾಣಗಳಲ್ಲಿ ಬಳಸುತ್ತಿದ್ದಾರೆ. ಇದರಲ್ಲಿ ಸರ್ಕಾರದ ಪಾತ್ರವೇನೂ ಇಲ್ಲ. ಈ ನಿರ್ಣಯದ ಹಿನ್ನೆಲೆ ತಿಳಿದರೆ ಇದೊಂದು ಮಹತ್ವದ ನಿರ್ಣಯ ಎನಿಸದಿರದು. ಇದು ಸಾಮಾಜಿಕ ಜಾಲತಾಣಗಳ ವಿಷಯವಲ್ಲ, ಬದಲಾಗಿ, “ಸರ್ಕಾರದ ಜಾಲತಾಣಗಳಲ್ಲಿ ಕನ್ನಡವನ್ನು ಅನುಷ್ಠಾನಗೊಳಿಸಬೇಕುಎನ್ನುವ ಮಹತ್ವದ ನಿರ್ಣಯವಾಗಿದೆ.

ಕರ್ನಾಟಕ ಸರಕಾರದ ವಿವಿಧ ಇಲಾಖೆಗಳಲ್ಲಿ ಕಛೇರಿ ಆಧುನೀಕರಣದ ನಿಟ್ಟಿನಲ್ಲಿ ಬಳಸಲಾಗುವ ಕಂಪ್ಯೂಟರ್‌ಗಳಲ್ಲಿ ಕನ್ನಡವನ್ನು ಬಳಸುವ ಬಗ್ಗೆ ಅಧ್ಯಯನ ಹಾಗೂ ಸಮಾಲೋಚನೆ ನಡೆಸುವುದು ಮತ್ತು ಕನ್ನಡವನ್ನೇ ಸಂಪೂರ್ಣವಾಗಿ ಬಳಸುವುದಕ್ಕೆ ಪ್ರೇರಕವಾಗಬಹುದಾದ ನಿರ್ಣಯಗಳನ್ನು ಕೈಗೊಂಡು ಅದನ್ನು ಕಾರ್ಯಗತಗೊಳಿಸಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳುವುದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಪ್ರಕಾರ್ಯಗಳಲ್ಲಿ ಒಂದು. ಈ ಹಿನ್ನೆಲೆಯಲ್ಲಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಇತ್ತೀಚೆಗೆ ಕನ್ನಡ-ತಂತ್ರಾಂಶ-ತಜ್ಞ ಶ್ರೀ ಬೇಳೂರು ಸುದರ್ಶನರವರಿಗೆ ಹೊಣೆಗಾರಿಕೆಯನ್ನು ವಹಿಸಿ ಸರ್ಕಾರದ ಜಾಲತಾಣಗಳನ್ನು ಕನ್ನಡೀಕರಿಸುವಲ್ಲಿ ಸೂಕ್ತ ಮಾರ್ಗಸೂಚಿಗಳನ್ನು ಸಿದ್ಧಪಡಿಸಿ ವರದಿಯೊಂದನ್ನು ನೀಡಲು ಕೋರಿತ್ತು. ಸಲ್ಲಿಕೆಯಾದ ವರದಿಯ ಶೀರ್ಷಿಕೆ - ಕರ್ನಾಟಕ ಸರ್ಕಾರದ ಜಾಲತಾಣಗಳಲ್ಲಿ ಕನ್ನಡ ಬಳಕೆ, ಶಿ?ತೆ, ಏಕರೂಪತೆ ಮತ್ತು ಸುಲಭಗ್ರಾಹ್ಯತೆ” - ಇದನ್ನು ಜಾರಿಗೊಳಿಸುವಂತೆ ಅಭಿವೃದ್ಧಿ ಪ್ರಾಧಿಕಾರವು ತನ್ನ ಶಿಫಾರಸ್ಸಿನೊಂದಿಗೆ ಕರ್ನಾಟಕ ಸರ್ಕಾರದ ಇ-ಆಡಳಿತ ಇಲಾಖೆಗೆ ಕಳುಹಿಸಿದೆ. ಪ್ರಾಧಿಕಾರದ ಒತ್ತಾಸೆಯ ಮೇರೆಗೆ ಮೈಸೂರಿನ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಈ ವರದಿಯ ಅನುಷ್ಠಾನಕ್ಕೆ ನಿರ್ಣಯವನ್ನು ಅಂಗೀಕರಿಸಲಾಗಿದೆ.

       ಪ್ರಸ್ತುತ ಕರ್ನಾಟಕ ಸರ್ಕಾರದ ಜಾಲತಾಣಗಳು ಯಾವುದೇ ಒಂದು ಶಿಷ್ಟತೆಗೆ ಒಳಪಡದೆ, ಬಹುತೇಕ ಜಾಲತಾಣಗಳು ಇಂಗ್ಲಿಷ್ ಭಾಷೆಯಲ್ಲಿಯೇ ಮಾಹಿತಿಗಳನ್ನು ನೀಡುತ್ತಿವೆ. ಸರಕಾರದ ಆಡಳಿತ ಭಾಷೆಯಾದ ಕನ್ನಡವೇ ಪ್ರಧಾನವಾಗಿ ಈ ಜಾಲತಾಣಗಳಲ್ಲಿ ಇರಬೇಕು.  ಪೂರ್ವನಿಗದಿಯಂತೆ (ಡಿಫಾಲ್ಟ್ ಆಗಿ) ಇಂಗ್ಲಿಷ್‌ನಲ್ಲಿರದೆ ಜಾಲತಾಣಗಳು ತೆರೆದಾಗ ತಕ್ಷಣಕ್ಕೆ ಕನ್ನಡದಲ್ಲಿಯೇ ಗೋಚರವಾಗಬೇಕು. ಇಂಗ್ಲಿಷ್ ಕಡ್ಡಾಯವಾಗಿರದೆ ಒಂದು ಆಯ್ಕೆಯಾಗಿರಬೇಕು. ಇವುಗಳು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಆಶಯಗಳಾಗಿವೆ. ಸರಕಾರದ ಜಾಲತಾಣಗಳು ಮೊದಲು ರಾಜ್ಯದ ಜನತೆಗೆ ಸರಳವಾಗಿ ಮತ್ತು ಕನ್ನಡದಲ್ಲಿ ಮಾಹಿತಿ ನೀಡಬೇಕು. ನಂತರದಲ್ಲಿ, ಅಗತ್ಯವಿರುವ ಎಲ್ಲರಿಗೂ ಇಂಗ್ಲಿಷ್‌ನಲ್ಲಿ ಮಾಹಿತಿ ನೀಡುವಂತೆ ಜಾಲತಾಣಗಳನ್ನು ರೂಪಿಸುವ ನೀತಿಯೊಂದನ್ನು ಸರ್ಕಾರವು ಜಾರಿಗೊಳಿಸಬೇಕು ಎನ್ನುವ ಉದ್ದೇಶದಿಂದ ಈ ವರದಿಯನ್ನು ಸಿದ್ಧಪಡಿಸಲಾಗಿದೆ.  ಈ ವರದಿಯು ಜಾರಿಯಾದರೆ, ಸರ್ಕಾರದ ಜಾಲತಾಣಗಳಲ್ಲಿನ ಮಾಹಿತಿಗಳು ಪ್ರಾಥಮಿಕವಾಗಿ ಮತ್ತು ಗರಿಷ್ಠಪ್ರಮಾಣದಲ್ಲಿ ಕನ್ನಡದಲ್ಲಿಯೇ ಲಭ್ಯವಾಗಲಿವೆ. ಸರ್ಕಾರದ ಜಾಲತಾಣಗಳು ಒಂದು ಶಿಷ್ಟತೆಗೆ (ಸ್ಟ್ಯಾಂಡರ್ಡ್) ಒಳಪಡಲಿವೆ. ಅಷ್ಟೇಅಲ್ಲದೆ, ಜನಸಾಮಾನ್ಯರ ಸುಲಭ ಬಳಕೆಗೆ ಅನುವಾಗಿ ಅವರಿಗೂ ಅವು ಸುಲಭವಾಗಿ ತಲುಪಬಲ್ಲವು.
       ಕಂಪ್ಯೂಟರ್ ಪರಿಭಾಷೆಯೆ ಪದಗಳನ್ನು ಇಂಗ್ಲಿಷ್‌ನಲ್ಲಿಯೇ ಬಳಸುವ ಪರಿಪಾಠವಿದೆ. ಅದರ ಬದಲಾಗಿ ತಾಂತ್ರಿಕ ಪದಗಳ ಕನ್ನಡೀಕರಣ, ಅಂದರೆ, ಆಂಗ್ಲಪದಗಳ ದೇಸೀಕರಣದ ಅಗತ್ಯವನ್ನು ವರದಿಯು ಒತ್ತಿಹೇಳಿದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನೇತೃತ್ವದಲ್ಲಿ ತಂತ್ರಜ್ಞಾನ ದೇಸೀಕರಣ ಸಮಿತಿಯೊಂದನ್ನು (Software Localisation Committee)  ರಚಿಸುವ ಸಲಹೆಯನ್ನೂ ಸಹ ಈ ವರದಿಯಲ್ಲಿ ನೀಡಲಾಗಿದೆ.  ಕನ್ನಡ ಭಾಷೆಗೆ ಸಂಬಂಧಿಸಿದಂತೆ ಹಲವು ತಂತ್ರಜ್ಞಾನೀಯ ಶಿಫಾರಸ್ಸುಗಳನ್ನು ವರದಿಯಲ್ಲಿ ಮಾಡಲಾಗಿದೆ. ಅವುಗಳು ಹೀಗಿವೆ : ವಿವಿಧ ಇಲಾಖೆಗಳ ಪದಕೋಶಗಳನ್ನು ಪ್ರಾಧಿಕಾರದ ಮೂಲಕ ಪ್ರಕಟಿಸಬೇಕು. ಇದು ಯುನಿಕೋಡ್ ಪಠ್ಯದಲ್ಲಿದ್ದು, ಕಾಲಕಾಲಕ್ಕೆ ಸೂಕ್ತ ಪರಿಷ್ಕರಣೆಗೊಳಪಟ್ಟು, ಪ್ರಾಧಿಕಾರದ ಜಾಲತಾಣದಲ್ಲಿ ಉಚಿತ ಡೌನ್‌ಲೊಡ್‌ಗೆ ಲಭ್ಯವಿರಬೇಕು.  ಜಾಲತಾಣದಲ್ಲಿನ ಸಂವಹನ ಸಂಬಂಧಿತ ಆದೇಶಪದಗಳ ದೇಸೀಕರಣ ಆಗಬೇಕು. (ಮೆನ್ಯು ಮತ್ತು ವೆಬ್‌ಸೈಟ್, ಗ್ರಾಫಿಕಲ್ ಯೂಸರ್ ಇಂಟರ್‌ಫೇಸ್ ಲೋಕಲೈಸೇಶನ್) ಇದಕ್ಕಾಗಿ ಸಮಿತಿಯು ಕನ್ನಡ ಮಾಹಿತಿ ತಂತ್ರಜ್ಞಾನ (ಐಟಿ) ಕಾರ್ಯಕರ್ತರ ಸಮುದಾಯದ ಜೊತೆಗೆ ಕೆಲಸ ಮಾಡಬೇಕು.  ಸರ್ಕಾರದ ಎಲ್ಲ ಜಾಲತಾಣಗಳು ಯುನಿಕೋಡ್ ಶಿಷ್ಟತೆಯನ್ನು ಅಳವಡಿಸಿಕೊಳ್ಳಬೇಕು. ಆ ಮೂಲಕ ಲಭ್ಯವಾಗುವ, ಲಿಪ್ಯಂತರಣ, ಭಾಷಾಂತರ, ಪಠ್ಯದ ಸ್ವಯಂ-ವಾಚನ ಇತ್ಯಾದಿ ಎಲ್ಲ ರೀತಿಯ ಸೌಲಭ್ಯಗಳಿಗೆ ಅನುವುಮಾಡಿಕೊಡಬೇಕು.

       ಜಾಲತಾಣಗಳು ಜನಸಾಮಾನ್ಯರೂ ಸಹ ಬಳಸುವಂತೆ ಸುಲಭ ಗ್ರಾಹ್ಯವಾಗುವಂತೆ ರೂಪುಗೊಳ್ಳಲು ಶಿಷ್ಟತೆಗಳನ್ನು ಪಾಲಿಸುವುದು ಅಗತ್ಯ. ಪ್ರಸ್ತುತ, ಸರ್ಕಾರದ ಜಾಲತಾಣಗಳಲ್ಲಿ ಏಕರೂಪತೆ ಇಲ್ಲ. ಇದರಿಂದ ಮಾಹಿತಿಯನ್ನು ಸುಲಭವಾಗಿ ಪಡೆಯಲು ಸಾಧ್ಯವಾಗುತ್ತಿಲ್ಲ. ಬದಲಾಗಿ, ಒಂದೊಂದು ಇಲಾಖೆಯು ಒಂದೊಂದು ನಮೂನೆಯಲ್ಲಿ ಮಾಹಿತಿಗಳನ್ನು ತಮ್ಮ ತಮ್ಮ ಜಾಲತಾಣಗಳಲ್ಲಿ ಅಳವಡಿಸಿರುವ ಕಾರಣ ಮಾಹಿತಿಯ ಹುಡುಕಾಟ ಕಷ್ಟಕರವಾಗಿದೆ ಎನ್ನಲಾಗಿದೆ. ಕನ್ನಡ ಭಾಷೆಯ ಮೂಲಕ ಸರ್ಕಾರದ ಜಾಲತಾಣಗಳು ಉತ್ತಮ ಗುಣಮಟ್ಟವನ್ನು ತಲುಪಲು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಶಿಷ್ಟತೆಗಳನ್ನು ಪರಿಪಾಲಿಸಬೇಕು ಎಂದು ವರದಿಯಲ್ಲಿ ಶಿಫಾರಸ್ಸು ಮಾಡಲಾಗಿದೆ.  ಸರ್ಕಾರದ ಹಲವು ಜಾಲತಾಣಗಳಲ್ಲಿ ಪ್ರಮುಖ ಭಾ? ಸಮಸ್ಯೆಗಳಿವೆ. ಕೇವಲ ಮುಖಪುಟದ ಕೆಲವೇ ಅಂಶಗಳು ಕನ್ನಡದಲ್ಲಿ ಇದ್ದು, ಒಳಪುಟಗಳಲ್ಲಿ ಎಲ್ಲೆಡೆ  ಇಂಗ್ಲಿಷ್ ಬಳಕೆಯಾಗಿದೆ. ಇದು ತಪ್ಪಬೇಕು.  ಕೋ?, ನಕಾಶೆ, ಪಟ್ಟಿಗಳು ಕೇವಲ ಇಂಗ್ಲಿಷ್‌ನಲ್ಲಿ ಮಾತ್ರವೇ ಇರದೆ, ವಿವಿಧ ಬಗೆಯ ಎಲ್ಲ ಮಾಹಿತಿಗಳು ಸಂಪೂರ್ಣವಾಗಿ ಕನ್ನಡೀಕರಣಗೊಳ್ಳಬೇಕು ಎಂಬ ಶಿಫಾರಸ್ಸನ್ನು ಮಾಡಲಾಗಿದೆ.  ರಾಜ್ಯ ಸರ್ಕಾರದ ಆಡಳಿತ ವ್ಯವಸ್ಥೆಯನ್ನು ಬಳಸುವ ನಾಗರಿಕರು ಜಾಲತಾಣಗಳ ಮೂಲಕ ವ್ಯವಹರಿಸುವಾಗ, ಮಾಹಿತಿ ಊಡಿಕೆಯನ್ನು ಕೇವಲ ಇಂಗ್ಲಿಷ್‌ನಲ್ಲಿ ಮಾತ್ರವೇ ಅಲ್ಲದೆ, ಕನ್ನಡದಲ್ಲಿಯೂ ಮಾಹಿತಿ ನೀಡುವ ಅನುಕೂಲವನ್ನು ಒದಗಿಸಬೇಕು. ಅದಕ್ಕಾಗಿ, ಅರ್ಜಿ ಮುಂತಾದವುಗಳನ್ನು ತುಂಬುವಾಗ ಕನ್ನಡವನ್ನು ಟೈಪ್ ಮಾಡುವ ವ್ಯವಸ್ಥೆ ಇರುವಂತೆ ಜಾಲತಾಣಗಳನ್ನು ರೂಪಿಸಬೇಕು ಎಂದು ಶಿಫಾರಸ್ಸು ಮಾಡಲಾಗಿದೆ.

       ರಾಜ್ಯ ಸರ್ಕಾರದ ಜಾಲತಾಣಗಳು ಕೇವಲ ಕನ್ನಡದಲ್ಲೇ ಇರಬೇಕೆಂಬುದು ಅವಶ್ಯಕವಾದರೂ, ಕನ್ನಡ ಲಿಪಿ ಅರಿಯದ, ಆದರೆ, ಕನ್ನಡ ಭಾಷೆಯನ್ನು ಬಲ್ಲ ಸಾರ್ವಜನಿಕರಿಗೆ ಈ ತಾಣಗಳನ್ನು ಬಳಕೆಸ್ನೇಹಿಯಾಗಿ ಮಾಡುವುದೂ ಸರ್ಕಾರದ ಕರ್ತವ್ಯ. ಹೀಗಾಗಿ, ಲಿಪ್ಯಂತರಣದ (ಭಾಷೆ ಕನ್ನಡವೇ ಆದರೂ ಲಿಪಿ ಮಾತ್ರ ಬೇರೆ ಬೇರೆ ಭಾಷೆಯದಾಗಿರುತ್ತದೆ) ಮೂಲಕ ಕನ್ನಡೇತರರಿಗೂ ಅನುಕೂಲ ಕಲ್ಪಿಸಲು ಶಿಫಾರಸ್ಸು ಮಾಡಲಾಗಿದೆ. ಜಾಲತಾಣದ ಬಳಕೆದಾರರು ಆಯ್ದ ಭಾಷೆಯ ಲಿಪಿಯಲ್ಲಿ ಕನ್ನಡವನ್ನು ಓದಬಹುದು.  ಯುನಿಕೋಡ್ ಶಿಷ್ಟತೆಯ ತಂತ್ರಜ್ಞಾನ ಅಳವಡಿಸುವುದರಿಂದ ಕನ್ನಡ ಲಿಪಿಯು ತತ್‌ಕ್ಷಣದಲ್ಲಿ ಲಿಪ್ಯಂತರಣಗೊಂಡು ಆಯ್ದ-ಭಾಷಾ-ಲಿಪಿಯಾಗಿ ಪರಿವರ್ತನೆಗೊಳ್ಳುತ್ತದೆ.
      
       ಈ ವರದಿಯ ಅನುಷ್ಠಾನದಿಂದ ಕನ್ನಡವು ಸರ್ಕಾರದ ಜಾಲತಾಣಗಳ ಅಧಿಕೃತ ಭಾಷೆಯಾಗಿ ಹೊರಹೊಮ್ಮಲಿದೆ. ಅಲ್ಲದೆ, ಸರ್ಕಾರದ ಎಲ್ಲ ಇಲಾಖೆಗಳ ಜಾಲತಾಣಗಳು ಒಂದೇ ರೀತಿಯ ಏಕರೂಪತೆಗೆ ಒಳಪಟ್ಟು ಮಾಹಿತಿಯ ಹರಿವು ಮತ್ತು ವಿನಿಮಯ ಸುಗಮವಾಗಲಿದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಶಿಫಾರಸ್ಸು ಮಾಡುವ ಅಧಿಕಾರ ಹೊಂದಿದ್ದು, ಈ ವರದಿಯ ಅನುಷ್ಠಾನದ ಹೊಣೆಗಾರಿಕೆ ಕರ್ನಾಟಕ ಸರ್ಕಾರದ ಇ-ಗೌರ‍್ನೆನ್ಸ್ (ಇ-ಆಡಳಿತ) ಇಲಾಖೆಗೆ ಸೇರಿದೆ.



ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

51. ಕಂಪ್ಯೂಟರ್ ಮತ್ತು ತಂತ್ರಜ್ಞಾನ : ಕನ್ನಡದಲ್ಲಿ ಪ್ರಕಟಿತ ಸಾಹಿತ್ಯದ ಒಂದು ಅವಲೋಕನ

ಕಂಪ್ಯೂಟರ್ ಕಲಿಕೆಗಾಗಿ ಹಲವಾರು ಕನ್ನಡ ಪುಸ್ತಕಗಳು ವಿವಿಧ ಕಾಲಘಟ್ಟಗಳಲ್ಲಿ ಪ್ರಕಟವಾಗಿವೆ. ೧೯೮೦ರ ದಶಕದ ಆರಂಭದಲ್ಲಿ ಕಂಪ್ಯೂಟರ್ ಕುರಿತು ಕನ್ನಡದಲ್ಲಿ ‘ ಗಣಕಯಂತ್ರಗಳು ’ ಎಂಬ ಮೊಟ್ಟಮೊದಲ ಪುಸ್ತಕವನ್ನು ರಚಿಸಿದವರು ಅಮೆರಿಕದಲ್ಲಿ ನೆಲೆಸಿದ್ದ ಶ್ರೀಮತಿ ನಳಿನಿ ಮೂರ್ತಿ. ತದನಂತರದಲ್ಲಿ , ಪ್ರಮುಖವಾಗಿ ಗುರುತಿಸಬಹುದಾದ ಪುಸ್ತಕಗಳು ಪ್ರಕಟಗೊಂಡಿವೆ. ಮಕ್ಕಳಿಗಾಗಿ ಕೆಲವು ಸಣ್ಣ ಸಣ್ಣ ಪುಸ್ತಕಗಳನ್ನು ಇನ್‌ಪೋಸಿಸ್ ಫೌಂಡೇಷನ್‌ನ ಶ್ರೀಮತಿ ಸುಧಾಮೂರ್ತಿಯವರು ರಚಿಸಿದ್ದಾರೆ. ಮೈಸೂರು ವಿಶ್ವವಿದ್ಯಾಲಯದ ಪ್ರಸಾರಾಂಗವು ೧೯೯೩ರಲ್ಲಿ ‘ ಕಂಪ್ಯೂಟರ್ ’ ಎಂಬ ಶೀರ್ಷಿಕೆಯ ಒಂದು ಪುಸ್ತಕವನ್ನು ಪ್ರಕಟಿಸಿದೆ. ಶ್ರೀ ಕೆ.ಹರಿದಾಸ ಭಟ್‌ರವರು ಇದನ್ನು ರಚಿಸಿದ್ದಾರೆ. ಕಂಪ್ಯೂಟರ್ ಕುರಿತ ವಿವರಣಾತ್ಮಕ ಅಧ್ಯಾಯಗಳು , ವಿವಿಧ ಕ್ಷೇತ್ರಗಳಲ್ಲಿ ಕಂಪ್ಯೂಟರ್ ಬಳಕೆ ಮತ್ತು ಭವಿಷ್ಯದಲ್ಲಿ ಕಂಪ್ಯೂಟರ್ ಬಳಕೆ ಕುರಿತಾಗಿ ಉಪಯುಕ್ತ ಮಾಹಿತಿಗಳು ಅದರಲ್ಲಿವೆ.           ಬೆಂಗಳೂರಿನ ಡೈನಾರಾಮ್ ಪಬ್ಲಿಕೇಷನ್ಸ್ ೧೯೯೪ರಲ್ಲಿ ‘ ಕಂಪ್ಯೂಟರ್ - ಮೂಲತತ್ವಗಳು ಮತ್ತು ಪ್ರೋಗ್ರಾಮ್ ರಚನೆ ’ ಎಂಬ ಪುಸ್ತಕವನ್ನು ಪ್ರಕಟಿಸಿದೆ. ವಿವಿಧ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕಂಪ್ಯೂಟರ್ ಶಿಕ್ಷಣವನ್ನು ನೀಡುತ್ತಿದ್ದ , ಕಂಪ್ಯೂಟರ್ ತಜ್ಞರಾದ ಪ್ರೊ || ಆರ್.ಶ್ರೀಧರ್ ಇದನ್ನು ರಚಿಸಿದ್ದಾರೆ. ಕಂಪ್ಯೂಟರ್ ಕುರ...

13. ಕಂಪ್ಯೂಟರಿನಲ್ಲಿ ಕನ್ನಡ ಟೈಪಿಂಗ್ ಕಲಿಯಬೇಕೆ? ಕನ್ನಡದ ಅಧಿಕೃತ ಕೀಲಿಮಣೆ ವಿನ್ಯಾಸ’ ಬಳಸಿ

ಕಂಪ್ಯೂಟರಿನಲ್ಲಿ ಕನ್ನಡ ಲಿಪಿತಂತ್ರಾಂಶಗಳನ್ನು ಅಳವಡಿಸಿ , ಇರುವ ಇಂಗ್ಲಿಷ್ ಕೀಬೋರ್ಡ್‌ನ್ನೇ ಬಳಸಿ ಕನ್ನಡದಲ್ಲಿ ವೇಗದ ಟೈಪಿಂಗ್‌ನ್ನು ಸುಲಭವಾಗಿ ಕಲಿಯಬಹುದು. ಇಂಗ್ಲಿಷ್‌ನ ೨೬ ಕೀಲಿಗಳನ್ನೇ ಬಳಸಿ , ನೆನಪಿನ ಶಕ್ತಿಗೆ ಹೆಚ್ಚಿನ ಒತ್ತಡವಿಲ್ಲದೆ , ತರ್ಕಬದ್ಧವಾಗಿ ಕನ್ನಡ ಭಾಷೆಯ ಪಠ್ಯವನ್ನು ಬೆರಳಚ್ಚಿಸಬಹುದಾದ ವಿನ್ಯಾಸ ಎಂದರೆ ಅದು ಕನ್ನಡದ ’ ಸ್ಟ್ಯಾಂಡರ್ಡ್ ಕೀಬೋರ್ಡ್ ಲೇಔಟ್ ’ ( ಕೆ.ಪಿ.ರಾವ್ ವಿನ್ಯಾಸ). ಇಂಗ್ಲಿಷ್‌ಕೀಲಿಗಳ ಸ್ಥಾನದಲ್ಲೇ ಕನ್ನಡ ಭಾಷೆಯ ಅಕ್ಷರ ಸ್ಥಾನಗಳನ್ನು ನಿಗದಿಪಡಿಸಿರುವ ಕಾರಣ , ಈಗಾಗಲೇ ವೇಗದ ಇಂಗ್ಲಿಷ್ ಟೈಪಿಂಗ್ ಕಲಿತವರಿಗೆ ಈ ವಿನ್ಯಾಸವನ್ನು ಬಳಸಿ ವೇಗದ ಕನ್ನಡ ಟೈಪಿಂಗ್ ಕಲಿಯುವುದು ಬಹಳ ಸುಲಭ. ಭಾರತೀಯ ಭಾಷೆಗಳ ಪಠ್ಯವನ್ನು ಸುಲಭವಾಗಿ ಬೆರಳಚ್ಚಿಸಲು ಸಾಧ್ಯವಾಗುವ ಇಂತಹ ಉತ್ತಮ ಕೀಲಿಮಣೆ ವಿನ್ಯಾಸದ ರೂವಾರಿ ಕನ್ನಡಿಗರಾದ ನಾಡೋಜ ಡಾ.ಕೆ.ಪಿ.ರಾವ್‌ರವರು.   ೧೯೯೯ರಲ್ಲಿ ಕರ್ನಾಟಕ ರಾಜ್ಯ ಸರಕಾರವು ಇದನ್ನು ‘ ಕನ್ನಡದ ಅಧಿಕೃತ ಕೀಲಿಮಣೆ ವಿನ್ಯಾಸ ’ ಎಂದು ಅಂಗೀಕರಿಸಿದೆ. ಕನ್ನಡ ಟೈಪಿಂಗ್‌ನ್ನು ಹೊಸದಾಗಿ ಕಲಿಯಬಯಸುವವರು ಇದೇ ವಿನ್ಯಾಸವನ್ನು ಕಲಿಯುವುದು ಉತ್ತಮ. ವೇಗದ ಟೈಪಿಂಗ್ ಕಲಿಯುವ ಮುನ್ನ , ಮೊದಲಿಗೆ , ಇಂಗ್ಲಿಷ್‌ನ ಯಾವ ಕೀಲಿಯನ್ನು ಒತ್ತಿದರೆ ಕನ್ನಡದ ಯಾವ ಅಕ್ಷರಗಳು ಮೂಡುತ್ತವೆ ಎಂಬ ಪ್ರಾಥಮಿಕ ಜ್ಞಾನ ಪಡೆಯಬೇಕು. ನಂತರ , ಗುಣಿತಾಕ್ಷರಗಳನ್ನು ಮತ್ತು ಒತ್ತಕ್ಷರಗಳನ್ನು ಮೂಡಿಸ...

32. ಕನ್ನಡ ತಂತ್ರಾಂಶ ಅಭಿವೃದ್ಧಿಯಲ್ಲಿ ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರ ಕಳಕಳಿ ಕಾಳಜಿಗಳು

ಪರಿಸರ ಕುರಿತ ಸಂಶೋಧನೆ ನಡೆಸಲು ಖ್ಯಾತ ಸಾಹಿತಿ ಮತ್ತು ಪರಿಸರ ಪ್ರೇಮಿ ಡಾ.ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರ ಸ್ಮರಣಾರ್ಥ ‘ ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನ ’ ಸ್ಥಾಪನೆಗೆ ಕಳೆದ ವರ್ಷದ ಬಜೆಟ್‌ನಲ್ಲಿ ಐದು ಕೋಟಿ ರೂ.ಗಳನ್ನು ಮೀಸಲಿರಿಸಲಾಗಿತ್ತು. ಅಧ್ಯಕ್ಷರು , ಸದಸ್ಯರ ನೇಮಕಾತಿಯ ಸರ್ಕಾರೀ ಆದೇಶವು ಈ ವರ್ಷ ಹೊರಬಂದು ಪ್ರತಿಷ್ಠಾನ ಅಸ್ತಿತ್ವಕ್ಕೆ ಬಂದಿದೆ. ಹಲವು ಉದ್ದೇಶಗಳನ್ನು ಹೊಂದಿರುವ ಪ್ರತಿಷ್ಠಾನವು , ಪ್ರತಿವರ್ಷ ಪರಿಸರ , ಸಾಹಿತ್ಯ , ತಂತ್ರಜ್ಞಾನ ವಿದ್ಯಾರ್ಥಿಗಳಿಗೆ ಫೆಲೋಶಿಪ್ ಮತ್ತು ವಿದ್ಯಾರ್ಥಿ ವೇತನ ನೀಡುವ ಕೆಲಸವನ್ನು ಸಹ ಮಾಡಲಿದೆ. ಪರಿಸರ , ವಿಜ್ಞಾನ ಮತ್ತು ತಂತ್ರಜ್ಞಾನದ ‘ ಕನ್ನಡ ವಿಷಯ ಸಾಹಿತ್ಯ ’ ವನ್ನು ಶ್ರೀಮಂತಗೊಳಿಸಿದ ಹೆಗ್ಗಳಿಕೆ ತೇಜಸ್ವಿಯವರಿಗೆ ಸಂದಿದೆ. ಕನ್ನಡ ತಂತ್ರಾಂಶ ಅಭಿವೃದ್ಧಿ ,   ಸಮಸ್ಯೆಗಳು ಹಾಗೂ ಪರಿಹಾರಗಳ ಕುರಿತಾಗಿ ತೇಜಸ್ವಿಯವರೊಂದಿಗೆ ಒಡನಾಡುವ ಹಲವು ಅವಕಾಶಗಳು ಈ ಅಂಕಣಕಾರನಿಗೆ ಒದಗಿಬಂದಿತ್ತು. ತೇಜಸ್ವಿಯವರಿಗೆ ಕನ್ನಡವನ್ನು ಕಂಪ್ಯೂಟರಿನಲ್ಲಿ ಸ್ವತಃ ಬಳಸಿದ ಅನುಭವವಿತ್ತು. ಅದರ ಸಮಸ್ಯೆಗಳ ಬಗ್ಗೆ ಅರಿವಿತ್ತು. ಅವುಗಳ ಪರಿಹಾರಗಳಿಗಾಗಿ ಹಲವು ಪ್ರಯತ್ನಗಳನ್ನು ಅವರು ಮಾಡಿದರು. ಕಂಪ್ಯೂಟರ್ ಸೇರಿದಂತೆ ಇತರೆ ಎಲೆಕ್ಟ್ರಾನಿಕ್ ಉಪಕರಣಗಳಲ್ಲಿ ಸಮರ್ಥವಾಗಿ ಕನ್ನಡ ಬಳಸಿ ವಿದ್ಯುನ್ಮಾನ ಮಾಧ್ಯಮದಲ್ಲಿಯೂ ಕನ್ನಡವನ್ನು ಉಳಿಸಿಬೆಳೆಸುವ ಅವಶ್ಯಕತೆಯನ್ನು ಅವರು ಮನಗಂಡಿದ್ದರು. ...