ನಮ್ಮ ದೇಶದಲ್ಲಿ ಆಧುನಿಕ ಮುದ್ರಣ ತಂತ್ರಜ್ಞಾನದ ಅನುಷ್ಠಾನ , ಭಾರತೀಯ ಭಾಷಾ ಲಿಪಿಗಳ ಫೋಟೋಕಂಪೋಸಿಂಗ್ ಮತ್ತು ಸುಂದರ ಮುದ್ರಣದ ಕುರಿತು ಯಾರೂ ಸಹ ಹೆಚ್ಚು ಆಲೋಚನೆಯನ್ನೇ ಮಾಡಿರದ ಸಂದರ್ಭದಲ್ಲಿ ಈ ಕಾರ್ಯಕ್ಷೇತ್ರದಲ್ಲಿ ವಿನೂತನ ಮಾರ್ಗಗಳನ್ನು ಅನ್ವೇಷಿಸಿದ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಹತ್ತು ಹಲವು ಹೊಸ ಪ್ರಯೋಗಗಳನ್ನು ಕೈಗೊಂಡು ಅದರಲ್ಲಿ ಯಶಸ್ಸನ್ನು ಕಂಡವರಲ್ಲಿ ಕನ್ನಡಿಗ ನಾಡೋಜ ಡಾ.ಕೆ.ಪಿ.ರಾವ್‌ರವರು ಮೊದಲಿಗರು. ಸರಳ ಮನಸ್ಸಿನ ತಂತ್ರಜ್ಞಾನಿಯಾದ ಕೆ.ಪಿ.ರಾವ್ (ಕಿನ್ನಿಕಂಬಳ ಪದ್ಮನಾಭ ರಾವ್) ಭಾರತೀಯ ಭಾಷೆಗಳ ಕಂಪ್ಯೂಟರ್ ಲಿಪಿತಂತ್ರಾಂಶದ ಪಿತಾಮಹಾ ಎಂದೇ ಖ್ಯಾತರಾಗಿದ್ದಾರೆ. ಪರ್ಸನಲ್ ಕಂಪ್ಯೂಟರ್‌ಗಳಲ್ಲಿ ಬಳಸಲು ‘ ಸೇಡಿಯಾಪು ’ ಎಂಬ ಕನ್ನಡದ ಪ್ರಥಮ ಲಿಪಿತಂತ್ರಾಂಶವನ್ನು ೧೯೮೮ರಲ್ಲಿಯೇ ಸಿದ್ಧಪಡಿಸಿ ಕನ್ನಡ ಸಾರಸ್ವತಲೋಕಕ್ಕೆ ಉಚಿತವಾಗಿ ನೀಡಿರುವ ಶ್ರೇಯಸ್ಸು ಅವರಿಗೆ ಸಂದಿದೆ. ಕನ್ನಡ ಲಿಪಿಯನ್ನು ಸುಲಭವಾಗಿ ಕಂಪ್ಯೂಟರ್‌ನಲ್ಲಿ ಮೂಡಿಸಲು ಸರಳ ಹಾಗೂ ತರ್ಕಬದ್ಧವಾದ ಕೀಲಿಮಣೆ ವಿನ್ಯಾಸವನ್ನು ಮೊಟ್ಟಮೊದಲ ಬಾರಿಗೆ ಆವಿಷ್ಕರಿಸಿದ ಹೆಗ್ಗಳಿಕೆ ಕೆ.ಪಿ.ರಾವ್‌ರವರದು. ಈ ಕೀಲಿಮಣೆ ವಿನ್ಯಾಸವು ಕನ್ನಡದ ಅಧಿಕೃತ ವಿನ್ಯಾಸ ಎಂದು ಕರ್ನಾಟಕ ಸರಕಾರದಿಂದ ಮಾನ್ಯತೆಯನ್ನು ಪಡೆದಿದೆ. ಇವರು ಪರಿಚಯಿಸಿದ ಧ್ವನ್ಯಾತ್ಮಕ ಕೀಲಿಮಣೆ ವಿನ್ಯಾಸವು ಕನ್ನಡ ಮಾತ್ರವಲ್ಲದೆ ಇತರ ಭಾರತೀಯ ಭಾಷೆಗಳನ್ನು ಕಂಪ್ಯೂಟರ್‌ನಲ್ಲಿ ಬಳಸುವುದನ್ನು ಸು...