ಸ್ಮಾರ್ಟ್‌ಫೋನುಗಳಲ್ಲಿ
ಕನ್ನಡಲಿಪಿಯನ್ನು ಮೂಡಿಸುವ ‘ಸಂಕಷ್ಟ’ ಮತ್ತು ‘ಆಲಸ್ಯ’ಗಳ ಕುರಿತು ಇದೇ ಅಂಕಣದಲ್ಲಿ ಓದಿದ್ದೀರಿ. ಇವೆಲ್ಲ ಸಮಸ್ಯೆಗಳಿಗೂ ಒಂದು ಪರಿಹಾರ ಎಂಬಂತೆ ‘ಲಿಪಿಕಾರ್’ ಆಪ್ ಅಭಿವೃದ್ಧಿಗೊಂಡು ಬಳಕೆಗೆ ಬಂದಿದೆ. ಈಗ ಸ್ಮಾರ್ಟ್‌ಫೋನುಗಳಲ್ಲಿ ಕನ್ನಡ ಲಿಪಿಯನ್ನು
ಮೂಡಿಸುವುದು ಸಂಕಷ್ಟದ ಕೆಲಸವೇನಲ್ಲ. ಈಗ ಅದೊಂದು ಆಟದಂತಹ ಕೆಲಸ. ಸ್ಮಾರ್ಟ್‌ಫೋನಿನಲ್ಲಿ
ಇತ್ತಕಡೆಯಿಂದ ನೀವು ಒಂದು ವಾಕ್ಯವನ್ನು ಮಾತನಾಡಿ ಮಗಿಸಿದರೆ ಸಾಕು. ನಿಮ್ಮ ಮಾತು ನೇರವಾಗಿ
ಸರ್ವರ್‌ಗೆ ಹೋಗಿ ಅತ್ತಲಿಂದ ಕನ್ನಡ ಲಿಪಿಯಾಗಿ ಸಿದ್ಧಗೊಂಡು ನಿಮ್ಮ ಸ್ಕ್ರೀನ್‌ನ ಮೇಲೆ
ಮೂಡುತ್ತದೆ. ಅದೇ ‘ಲಿಪಿಕಾರ’ನ ಅದ್ಭುತ ಚಮತ್ಕಾರ. ಹೌದು, ಈಗ ಕನ್ನಡಕ್ಕೂ ಬಂದಿದೆ ‘ಲಿಪಿಕಾರ್’ ಎಂಬ ಹೆಸರಿನ ಸ್ಪೀಚ್-ಟು-ಟೆಕ್ಸ್ಟ್ ಆಪ್. ಇದು ನಾವು
ಆಡಿದ ಮಾತನ್ನು ಪಠ್ಯಕ್ಕೆ ರೂಪಾಂತರಿಸುವ ಕಿರುತಂತ್ರಾಂಶವಾಗಿದೆ. ಆಂಡ್ರಾಯ್ಡ್ ಓ.ಎಸ್.
(ಆಪರೇಟಿಂಗ್ ಸಿಸ್ಟಂ) ಮೇಲೆ ಕಾರ್ಯನಿರ್ವಹಿಸುವ ಈ ಆಪ್ ಪ್ರಸ್ತುತ ಆನ್‌ಲೈನ್‌ನಲ್ಲಿ ಮಾತ್ರವೇ
ಕಾರ್ಯನಿರ್ವಹಿಸುತ್ತದೆ. ಅಂದರೆ, ಈ ಆಪ್ ಬಳಸುವಾಗ ಅಂತರಜಾಲ
ಸಂಪರ್ಕ ಇರಲೇಬೇಕು.
ಅಕ್ಷರಕೀಲಿಗಳನ್ನು ಒತ್ತುವ ಸಂಕಷ್ಟ,
ಕಾಗುಣಿತ-ಒತ್ತಕ್ಷರಗಳನ್ನು ಮೂಡಿಸಲು ಹಲವು
ಕೀಲಿಗಳನ್ನು ಒತ್ತುವ ಕಸರತ್ತಿನಿಂದಾಗಿ ಸ್ಮಾರ್ಟ್‌ಫೋನಿನಲ್ಲಿ ಕನ್ನಡ ಬಳಸುವುದು ಕಷ್ಟಕರ ಎಂಬ
ಅಭಿಪ್ರಾಯವಿತ್ತು. ಇದಕ್ಕೆ ಉತ್ತರವಾಗಿ ಕೈಬೆರಳಲ್ಲಿ ಬರೆಯುವ ‘ಗೂಗಲ್ ಹ್ಯಾಂಡ್‌ರೈಟಿಂಗ್ ಇನ್ಪುಟ್’ ಬಂತು. ಇದೀಗ ಬರೆಯುವ ತಾಪತ್ರಯವೂ ಇಲ್ಲದೆ ಕೇವಲ ಮಾತನಾಡಿದರೆ ಸಾಕು ಕನ್ನಡಲಿಪಿ ಮೂಡುವ
ಸರಳವಾದ ಆಪ್ ಬಿಡುಗಡೆಯಾಗಿ ಕನ್ನಡಿಗರ ಗಮನ ಸೆಳೆಯುತ್ತಿದೆ. ಇಂಟರ್‌ನೆಟ್ ಸಂಪರ್ಕ ಇಲ್ಲದಿದ್ದಾಗಲೂ ಬಳಸಲು
ಅನುವಾಗುವಂತೆ ಆಫ್‌ಲೈನ್ ಆಪ್ ಆಗಿ ಸಾಧ್ಯವಾದಷ್ಟು ಬೇಗನೆ ದೊರೆಯುವಂತಾಗಲಿ ಎಂದು ಬಹಳಷ್ಟು ಜನರು
ಬಯಸುತ್ತಿದ್ದಾರೆ.
ಗೂಗಲ್
ಪ್ಲೇಸ್ಟೋರ್‌ನಿಂದ ಈ ‘ಲಿಪಿಕಾರ್’ ಆಪ್‌ನ್ನು ಅನುಸ್ಥಾಪಿಸುವಾಗ ಕೆಲವು ಸೂಚನೆಗಳನ್ನು ಪಾಲಿಸುವ ಮೂಲಕ ಯಶಸ್ವಿಬಳಕೆಗೆ ಆಪ್‌ನ್ನು
ಮೊದಲಿಗೆ ಸಜ್ಜುಗೊಳಿಸಬೇಕು. ಕೆಲವು ಅನುಮತಿಗಳನ್ನು ಕೇಳಿದಾಗ ‘ಂಟಟoತಿ’
ಎಂದು ಆಯ್ದೆಮಾಡಿ ಮುಂದುವರೆಯಬೇಕು. ಆಂಡ್ರಾಯ್ಡ್ ಓ.ಎಸ್.ಹಳೆಯ ಆವೃತ್ತಿಗಳು ಇರುವ ಹಳೆಯ
ಮಾಡೆಲ್‌ಗಳ ಸ್ಮಾರ್ಟ್‌ಫೋನ್‌ಗಳಲ್ಲಿ ‘ಲಿಪಿಕಾರ್’ ಆಪ್ನ ಧ್ವನಿಗ್ರಹಣ ವ್ಯವಸ್ಥೆ ಅನುಸ್ಥಾಪನೆಗೊಳ್ಳುವುದಿಲ್ಲ. ಆಗ, ಕೇವಲ ಕೀಬೋಡ್ ಒತ್ತುವ ಮೂಲಕ ಕನ್ನಡ ಮೂಡಿಸುವ ಕೆಲಸ ನಿರ್ವಹಿಸಬಹುದಷ್ಟೇ. ಕಂದುಬಣ್ಣದಲ್ಲಿರುವ
‘ಮೈಕ್ರೋಫೋನ್’ ಚಿಹ್ನೆಯು ಮೂಡಿಬಂದಿದ್ದಲ್ಲಿ, ಧ್ವನಿಗ್ರಹಣ ವ್ಯವಸ್ಥೆ ಅನುಸ್ಥಾಪನೆಗೊಂಡಿದೆ ಎಂದು ಅರ್ಥ. ಮೈಕ್ರೋಫೋನ್ ಚಿಹ್ನೆಯನು ಒಮ್ಮೆ
ಒತ್ತಿದರೆ,
‘ಕೇಳುತ್ತಿದ್ದೇನೆ....’ ಎಂಬ ಸಂದೇಶ ಪ್ರಕಟಿಸುವ ಈ ಆಪ್ ವಾಕ್ಯವನ್ನು ಉಚ್ಛರಿಸಲು ನಮಗೆ ೧೫ ಸೆಕೆಂಡುಗಳ ಕಾಲ ಅವಕಾಶ
ನೀಡುತ್ತದೆ. ಕಾಲಾವಕಾಶದೊಳಗೆ ಮಾತು ಮುಗಿದರೆ ‘ಡನ್’
ಬಟನ್ ಒತ್ತಬೇಕು. ಕಾಲಾವಕಾಶ ಮುಗಿದರೆ
ಕೇಳಿಸಿಕೊಳ್ಳುವುದನ್ನು ತಾನಾಗಿಯೇ ನಿಲ್ಲಿಸಿ, ಲಿಪೀಕರಿಸುವ ಕೆಲಸ ಆರಂಭಗೊಳ್ಳುತ್ತದೆ. ಪ್ರಕಟಿತ ಲಿಪಿರೂಪದಲ್ಲಿ ಏನಾದರೂ ತಪ್ಪುಗಳಿದ್ದರೆ, ಕೀಬೋರ್ಡ್ ಬಳಸಿ ಅದನ್ನು ಸರಿಪಡಿಸಿಕೊಳ್ಳಬಹುದು. ಲಿಪಿಮೂಡಿಕೆಯ ಖಚಿತತೆಯು ನಮ್ಮ
ಉಚ್ಛಾರಣೆಯ ಗುಣಮಟ್ಟವನ್ನು ಅವಲಂಬಿಸಿದೆ. ಉಚ್ಛಾರಣೆ ಸ್ಪಷ್ಟವಾಗಿದ್ದು ಸಕಾಲಿಕವಾಗಿದ್ದರೆ
ಲಿಪಿಯೂ ಸಹ ಆಡಿದ ಮಾತಿನಂತೆಯೇ ತಪ್ಪಿಲ್ಲದೆ ಶೇಕಡಾ ನೂರರಷ್ಟು ಕರಾರುವಾಕ್ಕಾಗಿ
ಪ್ರಕಟಗೊಳ್ಳುತ್ತದೆ.
‘ಲಿಪಿಕಾರ್’ ಆಪ್‌ನಲ್ಲಿ ಕನ್ನಡ ಮತ್ತು ಇಂಗ್ಲಿಷ್ ಭಾಷಾ ಆಯ್ಕೆಗಳೂ
ಇವೆ. ಇಂಗ್ಲಿಷ್ ಮತ್ತು ಕನ್ನಡ ಎರಡೂ ಭಾಷೆಗಳಲ್ಲಿ ಪ್ರತ್ಯೇಕವಾಗಿ ಆಡಿದ ಮಾತುಗಳೂ ಸಹ ಆಯಾಯ
ಲಿಪಿಗಳಲ್ಲಿ ಮೂಡಿಬರುತ್ತವೆ. ಕನ್ನಡ ವಾಕ್ಯದ ನಂತರ, ‘ಇಂಗ್ಲಿಷ್’ ಎಂಬುದನ್ನು ಆಯ್ಕೆ ಮಾಡಿಕೊಂಡು ಇಂಗ್ಲಿಷ್‌ನಲ್ಲಿ
ಹೇಳಿದ ವಾಕ್ಯವು ಇಂಗ್ಲಿಷ್ ಲಿಪಿಯಲ್ಲಿ ಪ್ರಕಟಗೊಳ್ಳುತ್ತದೆ. ಮತ್ತೆ ‘ಕನ್ನಡ’ ಎಂಬುದನ್ನು ಒತ್ತಿ ಕನ್ನಡದಲ್ಲಿ ಮಾತು ಮುಂದುವರೆಸಬಹುದು.
ಮಾತುಗಳು ಒಂದೆರಡು ವಾಕ್ಯಗಳಿಗೆ ಸೀಮಿತವಾಗಿದ್ದರೆ ಎಲ್ಲವೂ ಸರಿಯಾಗಿ ಕಾರ್ಯನಿರ್ವಹಿಸುತ್ತವೆ.
ಒಮ್ಮೆಗೆ ಹೆಚ್ಚಿನ ವಾಕ್ಯಗಳನ್ನು ಹೇಳಿದರೆ, “ಅನಿರೀಕ್ಷಿತ ತೊಡಕುಂಟಾಗಿದೆ....’ ಎಂಬ ಸಂದೇಶ
ಪ್ರಕಟವಾಗುತ್ತದೆ. ಅಂಕಿಗಳೂ ಸಹ ಕನ್ನಡದಲ್ಲಿಯೇ ಇರುವುದು ಒಂದು ವಿಶೇಷ. ಇಂಗ್ಲಿಷ್ ಅಂಕಿಗಳು
ಬೇಕಾದರೆ ಅಥವಾ ಈಗಾಗಲೇ ಅಭ್ಯಾಸವಾಗಿರುವ ಬೇರೊಂದು ಕೀಬೋಡ್ ಆಯ್ಕೆ ಮಾಡಿಕೊಳ್ಳಬೇಕಾದರೆ
ತಕ್ಷಣದಲ್ಲಿ ಅದು ಸಾಧ್ಯವಾಗುವುದಿಲ್ಲ. ಬದಲಾವಣೆಗಾಗಿ ನೇರ, ಸರಳ ಆಯ್ಕೆಗಳನ್ನು ಮಾಡಿಕೊಳ್ಳಲು ಈ ಆಪ್‌ನಲ್ಲಿ ಇನ್ನೂ ಸೌಲಭ್ಯಗಳನ್ನು ಕಲ್ಪಿಸಿಲ್ಲ.
ಬಳಕೆದಾರರ ಹಿಮ್ಮಾಹಿತಿ (ಫೀಡ್‌ಬ್ಯಾಕ್) ಆಧರಿಸಿ ಮುಂದಿನ ದಿನಗಳಲ್ಲಿ ಈ ಆನ್‌ಲೈನ್ ಆಪ್ ಎಲ್ಲ
ಆಯಾಮಗಳಲ್ಲಿ ಮತ್ತಷ್ಟು ಸುಧಾರಣೆಗೊಳ್ಳುತ್ತದೆ ಎಂದು ಭಾವಿಸಬಹುದು.
ನೀವು
ಆಂಡ್ರಾಯ್ಡ್ ಫೋನು ಬಳಕೆದಾರರಾಗಿದ್ದಲ್ಲಿ, ಇನ್ನೇಕೆ ತಡ? ಗೂಗಲ್ ಪ್ಲೇಸ್ಟೋರ್‌ಗೆ ಹೋಗಿ ‘ಲಿಪಿಕಾರ’ನನ್ನು ಬರಮಾಡಿಕೊಳ್ಳಿ. ಇ-ಮೇಯ್ಲ್, ವಾಟ್ಸಾಪ್, ಫೇಸ್‌ಬುಕ್, ಟ್ವಿಟ್ಟರ್ ಅಪ್‌ಡೇಟ್‌ಗಳು ಹೀಗೆ
ಅಗತ್ಯವಿದ್ದೆಡೆಯೆಲ್ಲಾ ಕೇವಲ ಮಾತನ್ನಾಡುವ ಮೂಲಕ ಕನ್ನಡ ಪಠ್ಯವನ್ನು ಮೂಡಿಸಿ. ಕನ್ನಡಕ್ಕಾಗಿ
ಕೀಲಿಯೊತ್ತುಗಳ ಕಿರಿಕಿರಿ ಮತ್ತು ಕೈಬೆರಳಿನಿಂದ ಬರೆಯುವ ಆಲಸ್ಯ ಇವುಗಳಿಂದ ಹೊರಬಂದು ‘ಲಿಪಿಕಾರ’ನ ಮೋಡಿಯನ್ನು ನೋಡಿ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ